ಹಿರಿಯಡಕ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರ
ಉಡುಪಿ, ಜ.14: ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್, ರೋವರ್ ರೇಂಜರ್ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲೆಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಢಾಧಿಕಾರಿ ರಾಮ್‌ಪ್ರಕಾಶ್ ಎಂ.ಎನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುವಜನತೆ ಅವಕಾಶಗಳನ್ನು ಬಳಸಿಕೊಂಡು ಸತತ ಅಭ್ಯಾಸ ದಿಂದ ಉತ್ತಮ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡುವಂತೆ ಸಲಹೆ ನೀಡಿದರು.
ಹಿರಿಯ ವಕೀಲೆ ಅಮೃತಕಲಾ ಸಿ.ಎಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಸುಜಯಾ ಕೆ.ಎಸ್. ಉಪಸ್ಥಿತರಿದ್ದರು. ರೋವರ್ ಘಟಕದ ಸಂಚಾಲಕ ಅನಿಲ್ ಕುಮಾರ್ ಕೆ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವ ರೆಡ್‌ಕ್ರಾಸ್‌ನ ಸಂಚಾಲಕ ಡಾ.ರಾಘವೇಂದ್ರ ಪಿ.ಕೆ. ಸ್ವಾಗತಿಸಿ, ರೇಂಜರ್ ಘಟಕದ ಸಂಚಾಲಕಿ ಸವಿತಾ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ಪ್ರವೀಣ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.