ತನಿಖೆಗಾರರಿಗೆ ಮಹತ್ವದ ಮಾಹಿತಿ ನೀಡಬಲ್ಲ ಸಾಧನ ಪತ್ತೆ

Update: 2019-01-14 16:07 GMT

ಜಕಾರ್ತ (ಇಂಡೋನೇಶ್ಯ), ಜ. 14: ಅಕ್ಟೋಬರ್‌ನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ಇಂಡೋನೇಶ್ಯದ ಲಯನ್ ಏರ್ ವಿಮಾನಯಾನ ಸಂಸ್ಥೆಯ ವಿಮಾನದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಪತ್ತೆಯಾಗಿದೆ ಎಂದು ಇಂಡೋನೇಶ್ಯದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ವಿಮಾನ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಸಾರಿಗೆ ಸುರಕ್ಷಾ ಸಮಿತಿಯ ಅಧ್ಯಕ್ಷರು ಈ ವಿಷಯವನ್ನು ಸಾಗರ ಸಚಿವಾಲಯಕ್ಕೆ ತಿಳಿಸಿದ್ದಾರೆ ಎಂದು ಉಪ ಸಾಗರ ಸಚಿವ ರಿಜ್ವಾನ್ ಜಮಾಲುದ್ದೀನ್ ಸುದ್ದಿಗಾರರಿಗೆ ತಿಳಿಸಿದರು.

ಅಕ್ಟೋಬರ್ 29ರಂದು ಜಕಾರ್ತದಿಂದ ದೇಶದ ದ್ವೀಪವೊಂದಕ್ಕೆ ಹಾರುತ್ತಿದ್ದ 737 ಮ್ಯಾಕ್ಸ್ 8 ವಿಮಾನವು ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಮುದ್ರಕ್ಕೆ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲ 189 ಮಂದಿ ಮೃತಪಟ್ಟಿದ್ದಾರೆ.

ವಿಮಾನದ ಕಾಕ್‌ಪಿಟ್ ಡಾಟಾ ರೆಕಾರ್ಡರನ್ನು ಅಪಘಾತ ಸಂಭವಿಸಿದ ಕೆಲವೇ ದಿನಗಳಲ್ಲಿ ಪತ್ತೆಹಚ್ಚಲಾಗಿತ್ತು. ಕೊನೆಯ ನಾಲ್ಕು ಹಾರಾಟಗಳಲ್ಲಿ ವಿಮಾನದ ವೇಗ ಸೂಚಕವು ಹಾಳಾಗಿತ್ತು ಎಂದು ಅದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ವಾಯ್ಸ್ ರೆಕಾರ್ಡರ್ ಸರಿಯಾಗಿದ್ದರೆ, ಅದು ವಿಮಾನ ಅಪಘಾತದ ಬಗ್ಗೆ ತನಿಖೆಗಾರರಿಗೆ ಮಹತ್ವದ ಹೆಚ್ಚುವರಿ ಮಾಹಿತಿಯನ್ನು ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News