ಇರಾನ್ ಮೇಲೆ ದಾಳಿಗೆ ಕಾರಣ ಒದಗಿಸುವಂತೆ ಕೇಳಿದ್ದ ಶ್ವೇತಭವನ

Update: 2019-01-14 16:26 GMT

ವಾಶಿಂಗ್ಟನ್, ಜ. 14: ಇರಾನ್ ಮೇಲೆ ದಾಳಿ ನಡೆಸಲು ಕಾರಣಗಳನ್ನು ಒದಗಿಸುವಂತೆ ಕಳೆದ ವರ್ಷ ಶ್ವೇತಭವನದ ರಾಷ್ಟ್ರೀಯ ಭದ್ರತಾ ತಂಡವು ರಕ್ಷಣಾ ಇಲಾಖೆ ಪೆಂಟಗನ್‌ಗೆ ಕೋರಿಕೆ ಸಲ್ಲಿಸಿತ್ತು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ರವಿವಾರ ವರದಿ ಮಾಡಿದೆ.

ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಇರುವ ಪ್ರದೇಶದತ್ತ ಇರಾನ್‌ ನೊಂದಿಗೆ ನಂಟು ಹೊಂದಿರುವ ಭಯೋತ್ಪಾದಕರ ಗುಂಪೊಂದು ಕ್ಷಿಪಣಿಗಳನ್ನು ಹಾರಿಸಿದ ಬಳಿಕ ಈ ಕ್ರಮಕ್ಕೆ ಶ್ವೇತಭವನ ಮುಂದಾಗಿತ್ತು.

ಜಾನ್ ಬೋಲ್ಟನ್ ನೇತೃತ್ವದ ರಾಷ್ಟ್ರೀಯ ಭದ್ರತಾ ಮಂಡಳಿಯ ಈ ಮನವಿಯು ಪೆಂಟಗನ್ ಮತ್ತು ವಿದೇಶ ಇಲಾಖೆಯ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿತ್ತು ಎಂದು ಅಮೆರಿಕದ ಹಾಲಿ ಮತ್ತು ಮಾಜಿ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ಹೇಳಿದೆ.

ರಕ್ಷಣಾ ಇಲಾಖೆಯು ಈ ಮನವಿಯನ್ನು ಸ್ವೀಕರಿಸಿತು. ಆದರೆ, ಇರಾನ್ ಮೇಲೆ ದಾಳಿ ನಡೆಸಲು ಬೇಕಾದ ಕಾರಣಗಳನ್ನು ಅದು ಶ್ವೇತಭವನಕ್ಕೆ ನೀಡಿತೇ ಅಥವಾ ಈ ಬೆಳವಣಿಗೆ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮಾಹಿತಿಯಿತ್ತೇ ಎನ್ನುವುದು ತಿಳಿದುಬಂದಿಲ್ಲ.

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬಗ್ದಾದ್‌ನ ರಾಜತಾಂತ್ರಿಕ ವಲಯದತ್ತ ಮೂರು ಕ್ಷಿಪಣಿಗಳನ್ನು ಹಾರಿಸಲಾದ ಘಟನೆಯ ಬಳಿಕ ಈ ಬೆಳವಣಿಗೆ ನಡೆದಿತ್ತು. ಆ ಕ್ಷಿಪಣಿಗಳು ಖಾಲಿ ಸ್ಥಳವೊಂದಕ್ಕೆ ಅಪ್ಪಳಿಸಿದವು ಹಾಗು ಘಟನೆಯಲ್ಲಿ ಯಾರೂ ಗಾಯಗೊಳ್ಳಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News