ಹಸುವಿನ ಹೆಸರಲ್ಲಿ ಮತಯಾಚನೆ ಪಾಪ : ಕೇಜ್ರಿವಾಲ್

Update: 2019-01-14 17:04 GMT

ಸೋನಿಪತ್, ಜ.14: ಬಿಜೆಪಿ ನೇತೃತ್ವದ ಹರ್ಯಾಣದ ಸರಕಾರ ಜಾನುವಾರುಗಳ  ಆಹಾರಕ್ಕಾಗಿ ಸಾಕಷ್ಟು ನಿಧಿಯನ್ನು ನಿಯೋಜಿಸಿಲ್ಲ ಎಂದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಹಸುಗಳ ಹೆಸರಲ್ಲಿ ಮತಯಾಚನೆ ಪಾಪದ ಕೃತ್ಯ ಎಂದು ಹೇಳಿದ್ದಾರೆ.

ಹರ್ಯಾಣದ ಸೋನಿಪತ್‌ನಲ್ಲಿರುವ ಸೈದ್‌ಪುರ ಗ್ರಾಮದ ಗೋ ಶಾಲೆಗೆ ಭೇಟಿ ನೀಡಿದ ಬಳಿಕ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಹಸುವಿನ ಹೆಸರಿನಲ್ಲಿ ರಾಜಕೀಯ ಮಾಡುವುದು, ಮತ ಯಾಚಿಸುವುದು ಪಾಪದ ಕೆಲಸವಾಗಿದೆ ಎಂದರು. ದಿಲ್ಲಿ ಸರಕಾರ ಬಾವನಾ ನಗರದಲ್ಲಿ ದೇಶದಲ್ಲಿಯೇ ಅತ್ಯುತ್ತಮ ಗೋಶಾಲೆಯನ್ನು ನಿರ್ವಹಿಸುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಹೆಚ್ಚಿನ ಪ್ರಚಾರವನ್ನೂ ನೀಡಲಾಗಿಲ್ಲ ಎಂದರು.

ಆದರೆ ಬಿಜೆಪಿ ನೇತೃತ್ವದ ದಿಲ್ಲಿ ನಗರಪಾಲಿಕೆ ಹಸುಗಳ ಆಹಾರಕ್ಕೆ ನೀಡಬೇಕಿರುವ ಹಣವನ್ನು ಪಾವತಿಸುತ್ತಿಲ್ಲ. ಗೋಶಾಲೆಯಲ್ಲಿರುವ ಪ್ರತೀ ಹಸುವಿಗೆ ದಿನಕ್ಕೆ 25 ರೂಪಾಯಿ ಮೊತ್ತದ ಪಶು ಆಹಾರದ ಅಗತ್ಯವಿದ್ದು, ಇದರಲ್ಲಿ ಮಹಾನಗರಪಾಲಿಕೆ 20 ರೂ., ದಿಲ್ಲಿ ಸರಕಾರ 5 ರೂ. ಪಾವತಿಸಬೇಕು. ಈಗ ದಿಲ್ಲಿಯ ಆಪ್ ಸರಕಾರ ತನ್ನ ಪಾಲಿನ ಮೊತ್ತವನ್ನು 20 ರೂ.ಗೆ ಏರಿಸಿ, ಹಸುವಿಗೆ ದಿನಕ್ಕೆ 40 ರೂ. ಮೊತ್ತದ ಆಹಾರ ಸಿಗುವ ವ್ಯವಸ್ಥೆ ಮಾಡಿದೆ. ಆದರೆ ಕಳೆದ ಮೂರು ವರ್ಷದಿಂದ ದಿಲ್ಲಿ ನಗರಪಾಲಿಕೆ ತನ್ನ ಪಾಲಿನ ಮೊತ್ತವನ್ನು ಪಾವತಿಸಿಲ್ಲ ಎಂದರು.

  ಹರ್ಯಾಣದ ಸರಕಾರ ಗೋಶಾಲೆಯಲ್ಲಿರುವ ಪ್ರತೀ ಹಸುವಿಗೆ ವರ್ಷಕ್ಕೆ 140 ರೂ. ಆಹಾರ , ಅಂದರೆ ದಿನಕ್ಕೆ 40 ಪೈಸೆಯ ಆಹಾರ ನಿಗದಿಗೊಳಿಸಿದೆ. ಹಸುವಿನ ಹೆಸರಲ್ಲಿ ಮತ ಯಾಚಿಸುವವರು ಹಸುಗಳಿಗೆ ಸಾಕಷ್ಟು ಆಹಾರವನ್ನೂ ಪೂರೈಸಬೇಕು ಎಂದು ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News