ಎಚ್‌ಪಿಸಿಎಲ್‌ನಿಂದ ಮನಪಾಗೆ 100 ತ್ಯಾಜ್ಯ ಸುರಿಯುವ ತೊಟ್ಟಿಗಳ ಹಸ್ತಾಂತರ

Update: 2019-01-14 17:21 GMT

ಮಂಗಳೂರು, ಜ.14: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್)ನಿಂದ 100 (50 ಜೋಡಿ)ತ್ಯಾಜ್ಯ ಹಾಕುವ ತೊಟ್ಟಿ(ಲಿಟರ್‌ಬಿನ್) ಗಳನ್ನು ಮನಪಾಗೆ ಸೋಮವಾರ ಹಸ್ತಾಂತರಿಸಿತು.

ಎಚ್‌ಪಿಸಿಎಲ್‌ನ ಪ್ರಾದೇಶಿಕ ನಿರ್ದೇಶಕ ವಸಂತ ರಾವ್ ತ್ಯಾಜ್ಯ ಸುರಿಯುವ ಜೋಡಿತೊಟ್ಟಿಗಳನ್ನು ಮನಪಾ ಮೇಯರ್ ಭಾಸ್ಕರ್ ಕೆ. ಅವರಿಗೆ ಹಸ್ತಾಂತರಿಸಿದರು. ತ್ಯಾಜ್ಯ ಸುರಿಯುವ ಜೋಡಿತೊಟ್ಟಿಗಳನ್ನು ಮನಪಾ ಮೇಯರ್ ಸ್ವೀಕರಿಸಿದರು.

ಬಳಿಕ ಮಾತನಾಡಿದ ಮೇಯರ್ ಭಾಸ್ಕರ್, ಕೇಂದ್ರ ಸರಕಾರವು ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲೆಂದು ಹೊಸ ಷರತ್ತುಗಳನ್ನು ವಿಧಿಸಿದೆ. ಅದರಲ್ಲಿ ರಸ್ತೆಯ ಎಕ್ಕೆಲಗಳಲ್ಲಿ ನಡೆದಾಡುವ ಸಾರ್ವಜನಿಕರಿಗೆ ಕಸ ಸುರಿಯಲು ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಈ ವ್ಯವಸ್ಥೆ ಕಲ್ಪಿಸಲು ಎಚ್‌ಪಿಸಿಎಲ್ ಮುಂದೆ ಬಂದಿರುವುದು ಮಾದರಿ ಕಾರ್ಯವಾಗಿದೆ ಎಂದರು.

ಎಚ್‌ಪಿಸಿಎಲ್‌ನಿಂದ ಉರ್ವ ಸ್ಟೋರ್, ಕೆಎಸ್ಸಾರ್ಟಿಸಿ ಜಂಕ್ಷನ್, ಬಿಜೈ ಜಂಕ್ಷನ್, ಪಿವಿಎಸ್, ಎಂಪಾಯರ್ ಮಾಲ್ ಹತ್ತಿರ, ಲೇಡಿಹಿಲ್, ಅತ್ತಾವರ ಕಟ್ಟೆ, ಚೊಕ್ಕಬೆಟ್ಟು, ಬೈಕಂಪಾಡಿ ಜಂಕ್ಷನ್, ಪಣಂಬೂರು ಬೀಚ್, ಫಳ್ನೀರ್ ರಸ್ತೆ ಸೇರಿದಂತೆ ನಗರದ 50 ಪ್ರದೇಶಗಳನ್ನು ಗುರುತಿಸಿ 10 ಲಕ್ಷ ರೂ. ವೌಲ್ಯದ 100 ತ್ಯಾಜ್ಯ ಸುರಿಯುವ ಜೋಡಿತೊಟ್ಟಿಗಳನ್ನು ಮನಪಾಗೆ ಹಸ್ತಾಂತರಿಸಿದ್ದಾರೆ. ಎಚ್‌ಪಿಸಿಎಲ್‌ನಿಂದ ಈ ಹಿಂದೆಯೂ 30 ಲಕ್ಷ ರೂ. ವೌಲ್ಯದ ಐದು ಇ-ಶೌಚಾಲಯಗಳನ್ನು ಪಾಲಿಕೆಗೆ ನೀಡಿದ್ದಾರೆ ಎಂದರು.

ಮನಪಾ ಉಪಮೇಯರ್ ಮುಹಮ್ಮದ್ ಕುಂಜತ್‌ಬೈಲ್ ಮಾತನಾಡಿ, ಎಚ್‌ಪಿಸಿಎಲ್‌ನಿಂದ ಮನಪಾಗೆ ಹಸ್ತಾಂತರಿಸಿರುವ ತ್ಯಾಜ್ಯ ಸುರಿಯುವ ಜೋಡಿತೊಟ್ಟಿಗಳನ್ನು ನಗರದ ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು. ಇದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದಾಗ ತ್ಯಾಜ್ಯ ಸುರಿಯುವ ಜೋಡಿತೊಟ್ಟಿಗಳ ಸದ್ಬಳಕೆಯಾಗಲು ಸಾಧ್ಯ. ಸ್ವಚ್ಛ ಭಾರತ್ ಯೋಜನೆಗೆ ಪೂರಕವಾಗಿ ಪಾಲಿಕೆಯೂ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಎಚ್‌ಪಿಸಿಎಲ್‌ನ ಪ್ರಾದೇಶಿಕ ನಿರ್ದೇಶಕ ವಸಂತ ರಾವ್ ಮಾತನಾಡಿ, ಮಂಗಳೂರು ಪಾಲಿಕೆ ಸ್ವಚ್ಛತೆ ಕಾಯ್ದುಕೊಳ್ಳುವಿಕೆಯಲ್ಲಿ ಅಗ್ರಸ್ಥಾನ ಪಡೆದಿದ್ದು, ನಾಗರಿಕರ ಸೇವೆಗೆ ಎಚ್‌ಪಿಸಿಎಲ್ ಮುಂದಿನ ದಿನಗಳಲ್ಲೂ ಹಲವು ಯೋಜನೆಗಳನ್ನು ಹಾಕಿಕೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಮನಪಾ ಮುಖ್ಯಸಚೇತಕ ಶಶಿಧರ್ ಹೆಗಡೆ, ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಡಿಸೋಜ, ಪರಿಸರ ಅಭಿಯಂತರರು, ಮನಪಾ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News