ಜ.19, 20ರಂದು 'ಕಾಂಚನೋತ್ಸವ 2019' ಖ್ಯಾತ ಕಲಾವಿದರಿಂದ ಅಮೋಘ ದ್ವಂದ್ವ ಪಿಟೀಲು ವಾದನ

Update: 2019-01-14 17:28 GMT

ಉಪ್ಪಿನಂಗಡಿ, ಜ. 14: ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಪ್ರಸ್ತುತ ಪಡಿಸುವ 65ನೇ ವರ್ಷದ ಕಲಾಸೇವೆಯ 'ಕಾಂಚನೋತ್ಸವ 2019' ಜ.19 ಮತ್ತು 20ರಂದು ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ನಡೆಯಲಿದೆ ಎಂದು ಟ್ರಸ್ಟ್‍ನ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂರವರು ತಿಳಿಸಿದ್ದಾರೆ.

65ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಹಾಗೂ ಸ್ಥಾಪಕ ಗುರು ಸಂಗೀತರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ ಮತ್ತು ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆಯೂ ನಡೆಯಲಿದೆ.

ಜ.19ರಂದು ಬೆಳಗ್ಗೆ `ಊಂಛ ವೃತ್ತಿ' ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಮತ್ತು ದಿವ್ಯನಾಮ ಸಂಕೀರ್ತನೆಗಳ ವಾದ್ಯ-ಗಾಯನ, ಭಜನೆಯೊಂದಿಗೆ ಕಾಂಚನ ಮನೆತನದಿಂದ ಸಂಗೀತ ಶಾಲೆಯ ತನಕ ಸಂಗೀತ ನಡಿಗೆ ನಡೆಯಲಿದೆ. ಬಳಿಕ ಪುರಂದರ ದಾಸರ ಪಿಳ್ಳಾರಿಗೀತೆಗಳು ಮತ್ತು ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾನ ನಡೆಯಲಿದೆ.ಬಳಿಕ ಸಂಜೆಯ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸಂಗೀತ ಶಾಲೆಯಲ್ಲಿ ನಾರಾಯಣ ಬಡೆಕಿಲ್ಲಾಯರ ನೇತೃತ್ವದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ರಾತ್ರಿ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಜ.20ರಂದು ಬೆಳಿಗ್ಗೆ ಉಪ್ಪಿನಂಗಡಿ ಗಾನಭಾರತೀ ಸಂಗೀತ ಶಾಲೆ, ಕಾಂಚನ ಸುಬ್ಬರತ್ನಂ ಸಂಗೀತ ಶಾಲೆ ಪುತ್ತೂರು, ಸರಸ್ವತೀ ಸಂಗೀತ ಶಾಲೆ ಸುಬ್ರಹ್ಮಣ್ಯ ಹಾಗೂ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ನಡೆಯುವ ಎರಡೂ ದಿನವೂ ಮಧ್ಯಾಹ್ನ ಹಾಗೂ ರಾತ್ರಿ ಭೋಜನ ವ್ಯವಸ್ಥೆಯಿದೆ ಎಂದು ಕೆ.ರೋಹಿಣಿ ಸುಬ್ಬರತ್ನಂರವರು ತಿಳಿಸಿದ್ದಾರೆ.

ಖ್ಯಾತ ಕಲಾವಿದರಿಂದ ಸಂಗೀತ ಕಛೇರಿ

ಜ.20ರಂದು ಸಂಜೆ ಖ್ಯಾತ ಕಲಾವಿದರಿಂದ ಅಮೋಘ ದ್ವಂದ್ವ ಪಿಟೀಲು ವಾದನ ನಡೆಯಲಿದೆ. ವಿದ್ವಾನ್ ಮೈಸೂರು ಎಂ.ನಾಗರಾಜ್, ವಿದ್ವಾನ್ ಮೈಸೂರು ಡಾ.ಎಂ.ಮಂಜುನಾಥ್‍ರವರು ದ್ವಂದ್ವ ಪಿಟೀಲು ವಾದನ ನುಡಿಸಲಿದ್ದಾರೆ. ವಿದ್ವಾನ್ ಗುರು ಕಾರೈಕುಡಿ ಮಣಿಯವರು ಮೃದಂಗದಲ್ಲಿ ಹಾಗೂ ವಿದ್ವಾನ್ ಗಿರಿಧರ ಉಡುಪರವರು ಘಟಂನಲ್ಲಿ ಸಹಕರಿಸಲಿದ್ದಾರೆ ಎಂದು ಕೆ.ರೋಹಿಣಿ ಸುಬ್ಬರತ್ನಂರವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News