ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಜೀರ್ಣೋದ್ಧಾರ, ಯೋಜನೆಯ ಮನವಿ ಪತ್ರ ಬಿಡುಗಡೆ

Update: 2019-01-14 17:40 GMT

ಮೂಡುಬಿದಿರೆ, ಜ. 14: ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ 15 ಕೋಟಿ ರೂ. ವೆಚ್ಚದಲ್ಲಿ ನಡೆಸಲು ಉದ್ದೇಶಿಸಿರುವ  ಪುತ್ತಿಗೆ ಶ್ರೀ ಮಹತೋಭಾರ ಶ್ರೀ ಸೋಮನಾಥೇಶ್ವರದ ಜೀರ್ಣೋದ್ಧಾರದ ಮನವಿ ಪತ್ರವನ್ನು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸೋಮವಾರ  ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಪೇಜಾವರ ಶ್ರೀ ಸಮುದ್ರಮಥನದ ವೇಳೆ ಉದ್ಭವಿಸಿದ ವಿಷವನ್ನು ನುಂಗಿ ದೇವತೆಗಳಿಗೆ ಅಮೃತ ಲಭಿಸುವಂತೆ ಮಾಡಿದ ದೇವರು ಶಿವ. ಅನ್ಯರ ಸುಖಕ್ಕಾಗಿ ಕಷ್ಟ ಪಡುವುದೇ ತಪ. ನಾವು ನಮಗಾಗಿ ಕಷ್ಟ ಪಡುವುದು ತಾಪ ಎಂಬ ಶಿವ ಸಂದೇಶ ನಮಗೆ ಆದರ್ಶವಾಗಬೇಕು' ಎಂದು ನುಡಿದ ಅವರು 'ಮಕರ ಸಂಕ್ರಮಣದಂದು ಸೂರ್ಯನ ಚಲನೆಯ ಗತಿ ಬದಲಾದಂತೆ ಸೋಮನಾಥೇಶ್ವರ ದೇವಳದ ಅಭಿವೃದ್ದಿಯ ಚಿತ್ರವೂ ಬದಲಾಗಲಿ' ಎಂದು ಹಾರೈಸಿದರು.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ , ಮಾಜಿ ಸಚಿವ,  ಕೆ. ಅಭಯಚಂದ್ರ ಅವರು ಮಾತನಾಡಿ, `ವಿಸ್ತಾರವಾದ ಮಾಗಣೆಗಳ ವ್ಯಾಪ್ತಿಯನ್ನು ಹೊಂದಿ ರುವ ಪುತ್ತಿಗೆ ದೇವಳದ ಭಕ್ತಾದಿಗಳೆಲ್ಲರೂ ಮುಂದೆ ಬಂದು ಐತಿಹಾಸಿಕವಾಗಿ ನಡೆಯಲಿರುವ ಜೀರ್ಣೋದ್ಧಾರ ಕಾರ್ಯದಲ್ಲಿ ಕೈ ಜೋಡಿಸಬೇಕಾಗಿದೆ' ಎಂದು ವಿನಂತಿಸಿದರು.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರು  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದೊಡ್ಡ ದಾನಿಗಳು ಈ ದೇವಳದ ಜೀರ್ಣೋದ್ಧಾರಕ್ಕೆ ಮುಂದೆ ಬಂದಿರುವಂತೆಯೇ ಜೀರ್ಣೋದ್ಧಾರದ ವಿವಿಧ ಭಾಗಗಳ ಬಗ್ಗೆ ಯಥಾಸಾಧ್ಯ ದೇಣಿಗೆ ನೀಡಲು ಭಕ್ತಾದಿಗಳು ಮುಂದೆ ಬರಬೇಕಾಗಿದೆ' ಎಂದು ವಿನಂತಿಸಿದರು.

ಪ್ರಾರಂಭಿಕವಾಗಿ ರೂ. 1 ಲಕ್ಷ ಮತ್ತು ಮೇಲ್ಪಟ್ಟು ದೇಣಿಗೆ ನೀಡಿರುವ ದಾನಿಗಳಿಗೆ ಪೇಜಾವರ ಶ್ರೀಗಳು ಫಲ ಮಂತ್ರಾಕ್ಷತೆ ಇತ್ತು ಹರಸಿದರು. ದೇವಳದ ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಡಿಗುತ್ತು  ವಿದ್ಯಾ ರಮೇಶ ಭಟ್, ದಾನಿ, ಉದ್ಯಮಿ  ರಾಮ್‍ ಪ್ರಸಾದ್  ಭಟ್ ದಂಪತಿ, ಉದ್ಯಮಿ ಶ್ರೀಪತಿ ಭಟ್,  ಜಿಲ್ಲಾ  ಕ.ಸಾ.ಪ. ಅಧ್ಯಕ್ಷ ಪ್ರದೀಪ್‍ಕುಮಾರ ಕಲ್ಕೂರ, ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ ಭಾಗವಹಿಸಿದ್ದರು. ದೇವಸ್ಥಾನದ ಆನುವಂಶಿಕ ಆಡಳಿತೆದಾರ ಕುಲದೀಪ ಎಂ. ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು. ಪೇಜಾವರ ಸುಧಾಕರ ರಾವ್ ಸ್ವಾಗತಿಸಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಹಂಡೇಲುಗುತ್ತು ಧನಕೀರ್ತಿ ಬಲಿಪ ವಂದಿಸಿದರು. ಸಂಕ್ರಮಣ ಪ್ರಯುಕ್ತ ಮಾರಿ ಸಮಾರಾಧನೆ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News