15 ದಿನಗಳ ಕಾಲ ಮೀನು ಮಾರಟ ನಿಷೇಧಿಸಿದ ಬಿಹಾರ ಸರಕಾರ

Update: 2019-01-14 17:44 GMT

ಪಾಟ್ನ, ಜ.14: ಸ್ಯಾಂಪಲ್‌ಗಳಲ್ಲಿ ವಿಷಕಾರಿ ರಾಸಾಯನಿಕವಾದ ಫಾರ್ಮಲಿನ್‌ನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವ ಕಾರಣ ಪಾಟ್ನಾ ನಗರಪಾಲಿಕೆ ವ್ಯಾಪ್ತಿಯ ಪ್ರದೇಶದಲ್ಲಿ ಮೀನುಗಳ ಸಾಗಣೆ, ಮಾರಾಟ ಮತ್ತು ಸಂಗ್ರಹಿಸಿ ಇಡುವುದನ್ನು 15 ದಿನಗಳ ಅವಧಿಗೆ ನಿಷೇಧಿಸಲಾಗಿದೆ ಎಂದು ಬಿಹಾರ ಸರಕಾರ ತಿಳಿಸಿದೆ.

ಮೀನುಗಳನ್ನು ತಾಜಾ ಆಗಿ ಇಡಲು ಫಾರ್ಮಲಿನ್ ರಾಸಾಯನಿಕವನ್ನು ಸೇರಿಸಲಾಗುತ್ತದೆ. ಆದರೆ ಅಧಿಕ ಪ್ರಮಾಣದ ಫಾರ್ಮಲಿನ್ ಬಳಸಿದರೆ ಅದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪಾಟ್ನದಿಂದ ಸಂಗ್ರಹಿಸಲಾದ ಎಲ್ಲಾ 10 ಮೀನಿನ ಮಾದರಿಗಳಲ್ಲೂ ಫಾರ್ಮಲಿನ್‌ನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವುದನ್ನು ಕೋಲ್ಕತಾದ ‘ಸೆಂಟ್ರಲ್ ಫುಡ್ ಲ್ಯಾಬೊರೇಟರಿ’ಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜನತೆಯ ಸುರಕ್ಷೆ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಮೀನುಗಳ ಮಾರಾಟಕ್ಕೆ 15 ದಿನಗಳ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಮೀನುಗಳು, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ರವಾನೆಯಾಗಿರುವ ಮೀನುಗಳ ಮಾದರಿಯನ್ನು ಪರೀಕ್ಷೆಗಾಗಿ ಕಳಿಸಲಾಗಿತ್ತು. ಹೊಸದಾಗಿ ಮೀನಿನ ಸ್ಯಾಂಪಲನ್ನು ಕಳಿಸುವಂತೆ ಮುಝಫರ್‌ಪುರ, ಪೂರ್ನಿಯ, ದರ್ಭಾಂಗ, ಭಗಲ್‌ಪುರ, ಗಯಾ ಮತ್ತು ಪಾಟ್ನ ನಗರಗಳಿಗೆ ಸೂಚಿಸಲಾಗಿದೆ ಎಂದು ಬಿಹಾರ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಹಾರ ಸುರಕ್ಷಾ ಆಯುಕ್ತ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಹೊಸ ಸ್ಯಾಂಪಲ್‌ಗಳ ವರದಿ ಕೈತಲುಪಲು ಆರರಿಂದ 8 ವಾರ ಬೇಕಾಗಬಹುದು . ಅಲ್ಲದೆ ತಜ್ಞರ ತಂಡವನ್ನು ಪ.ಬಂಗಾಳ ಮತ್ತು ಆಂಧ್ರ ಪ್ರದೇಶಕ್ಕೆ ಕಳುಹಿಸಿ , ಲ್ಯಾಬೊರೇಟರಿಯ ವರದಿಯ ಕುರಿತು ಅಲ್ಲಿನ ಪಶುಸಂಗೋಪನಾ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲು ತಿಳಿಸಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News