×
Ad

ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಕಾರು: ಇಬ್ಬರು ಬೀದಿಬದಿ ವ್ಯಾಪಾರಸ್ಥರು ಗಂಭೀರ

Update: 2019-01-14 23:27 IST

ಮಂಗಳೂರು, ಜ.14: ಮಕರ ಸಂಕ್ರಮಣಕ್ಕಾಗಿ ಬೀದಿಬದಿಯಲ್ಲಿ ಹೂ ಮಾರಾಟಕ್ಕೆ ಬಂದಿದ್ದ ಬೀದಿಬದಿ ವ್ಯಾಪಾಸ್ಥರ ಮೇಲೆ ಕಾರೊಂದು ಹರಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಮೈಸೂರು ಮೂಲದ ಹೂ ವ್ಯಾಪಾರಿಗಳಾದ ಸಣ್ಣಪ್ಪ (35) ರಾಜೇಶ್ (28) ಗಂಭೀರವಾಗಿ ಗಾಯಗೊಂಡವರು.

ಜ.13ರಂದು ರಾತ್ರಿ 11:45ರ ಸುಮಾರು ಮಂಗಳೂರು ನಗರದ ಕೆಎಸ್ಸಾರ್ಟಿಸಿ ಸಮೀಪದ ಭಾರತ್‌ಮಾಲ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಮಕರ ಸಂಕ್ರಾಂತಿ ಪ್ರಯುಕ್ತ ಮೈಸೂರಿನಿಂದ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಭಾರತ್‌ಮಾಲ್ ಮುಂಭಾಗ ಹೂ ಮಾರಲು ಬಂದಿದ್ದರು. ಹಗಲು ವೇಳೆ ಹೂವು ಮಾರಿದ್ದ ವ್ಯಾಪಾರಸ್ಥರು ರಾತ್ರಿಯಾದೊಡನೆ ತಾವು ತಂದಿದ್ದ ಹೂವನ್ನು ಗಂಟುಕಟ್ಟಿ ಮಲಗಿದ್ದರು.

ಈ ವೇಳೆ ಕೆಪಿಟಿ ಕಡೆಯಿಂದ ಲಾಲ್‌ಬಾಗ್ ಕಡೆಗೆ ತೆರಳುತ್ತಿದ್ದ ಕೇರಳ ಪಾಸಿಂಗ್ ನಂಬರ್‌ನ ರಿಟ್ಝ್ ಕಾರೊಂದು ನಿಯಂತ್ರಣ ತಪ್ಪಿ ಬೀದಿಬದಿ ಮಲಗಿದ್ದ ವ್ಯಾಪಾರಸ್ಥರ ಮೇಲೆ ಏಕಾಏಕಿ ಹರಿಸಿದ್ದಾರೆ. ಪರಿಣಾಮ ಸಣ್ಣಪ್ಪ ಅವರ ಬಲಕಾಲಿನ ಮೊಣಕಾಲು, ಬಲಕೈ, ಹಾಗೂ ತಲೆಗೆ ಪೆಟ್ಟುಬಿದ್ದದ್ದು ಮೂಗನಲ್ಲಿ ರಕ್ತಸ್ರಾವ ಉಂಟಾಗಿದೆ. ರಾಜೇಶ ಅವರಿಗೆ ಲಿವರ್ ಮತ್ತು ಕಿಡ್ನಿಗೆ ತೀವ್ರ ಸ್ವರೂಪದ ಪೆಟ್ಟುಬಿದ್ದಿದ್ದು ಗಂಭೀರವಾಗಿದ್ದಾರೆ.

ಬೀದಿಬದಿ ವ್ಯಾಪಾರಸ್ಥರ ಮೇಲೆ ಕಾರು ಹತ್ತಿಸಿದ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸಾರ್ವಜನಿಕರು ಗಾಯಾಳುಗಳನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಈ ಕುರಿತು ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಕಾರು ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News