ಹೋಮ್‌ಸ್ಟೇನಲ್ಲಿ ಜೂಜಾಟ: 21 ಆರೋಪಿಗಳ ಬಂಧನ, 86.47 ಲಕ್ಷ ರೂ. ಮೌಲ್ಯದ ಸೊತ್ತು ವಶ
ಮಂಗಳೂರು, ಜ.14: ನಗರದ ಅಡ್ಯಾರ್ ಗ್ರಾಮದ ಸುರೇಶ್ ಶೆಟ್ಟಿ ಎಂಬವರು ಮಾಲಕತ್ವದ ‘ಅಡ್ಯಾರ್ ಹಿಲ್ಸ್’ ಹೋಮ್ ಸ್ಟೇ ಕಟ್ಟಡದಲ್ಲಿ ಸೋಮವಾರ ಜೂಜಾಟ (ಅಂದರ್ ಬಾಹರ್) ಆಡುತ್ತಿದ್ದ ಆರೋಪದಲ್ಲಿ 21 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮೆಲ್ವಿನ್‌ವಿಶ್ವಾಸ್ ಡಿಸೋಜ, ಶರತ್‌ಕುಮಾರ್, ಗುರುಪ್ರಸಾದ್, ರಾಜ ಪೂಜಾರಿ, ಮುಹಮ್ಮದ್ ಹನೀಫ್, ಶಿವರಾಜ್, ಅನ್ವರ್, ಆದರ್ಶ, ರಾಧಾಕೃಷ್ಣ ನಾಯರ್, ಅರ್ವಿನ್ ಡಿಸೋಜ, ಮಹಾದೇವಪ್ಪ, ಕುಮಾರನಾಥ ಶೆಟ್ಟಿ, ಆಲ್ವಿನ್ ರಿಚಾರ್ಡ್, ಗಣೇಶ್ ವಿ.ಎಸ್., ಪ್ರೀತಂ ಪ್ರಶಾಂತ್, ಎ.ಬಿ. ಬಶೀರ್, ಸಾವನ್, ನಿತಿನ್ ಡಿಸೋಜ, ಆಬೀದ್ ಹುಸೈನ್, ಡೆಂಝಿಲ್ ವಿಕ್ಸನ್ ಡಿಸೋಜ, ಮುಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ.
ಹೋಮ್ ಸ್ಟೇ ಕಟ್ಟಡದಲ್ಲಿ ಜೂಜಾಟವಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸಿಸಿಬಿ ಪಿಎಸ್ಸೈ ಕಬ್ಬಾಳ್‌ರಾಜ್ ಮತ್ತು ತಂಡ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳು ಬಂಧಿಸಿದರು.
ದಾಳಿ ಸಮಯದಲ್ಲಿ ಜೂಜಾಟಕ್ಕೆ ಬಳಸಿದ ನಗದು 18,37,000 ರೂ. ಹಾಗೂ 66,75,000 ರೂ. ಮೌಲ್ಯದ ಎಂಟು ಕಾರು ಮತ್ತು ಆಟೊರಿಕ್ಷಾ ಹಾಗೂ 1,35,700 ರೂ. ಮೌಲ್ಯದ 24 ಮೊಬೈಲ್ ಸೆಟ್‌ಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಸ್ವಾಧಿನಪಡಿಸಿಕೊಂಡ ಸೊತ್ತುಗಳ ಮೌಲ್ಯ 86,47,700 ರೂ. ಎಂದು ಅಂದಾಜಿಸಲಾಗಿದೆ.
ದಾಳಿ ವೇಳೆ ಹೊಮ್ ಸ್ಟೇ ಮಾಲಕ ಸುರೇಶ್ ಶೆಟ್ಟಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳನ್ನು ಹಾಗೂ ವಶಕ್ಕೆ ಪಡೆದ ಸೊತ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.