ಯುನಿವೆಫ್: ಉಪ್ಪಿನಂಗಡಿಯಲ್ಲಿ ಸೀರತ್ ಸಮಾವೇಶ
ಮಂಗಳೂರು, ಜ. 14: ಯುನಿವೆಫ್ ಕರ್ನಾಟಕ ನ.30 ರಿಂದ ಫೆ. 1 ರ ವರೆಗೆ "ಮಾನವ ಸಮಾಜ ಮತ್ತು ಆಧ್ಯಾತ್ಮಿಕತೆ ಪ್ರವಾದಿ ಮುಹಮ್ಮದ್ (ಸ) ರ ದೃಷ್ಟಿಯಲ್ಲಿ" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಉಪ್ಪಿನಂಗಡಿಯ ಎಚ್.ಎಂ. ಹಾಲ್ ಪ್ರಾಂಗಣದಲ್ಲಿ ಸೀರತ್ ಸಮಾವೇಶ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ಥಳೀಯ ಉದ್ಯಮಿ ಅಬ್ದುಲ್ ಅಝೀಝ್ ಬಸ್ತಿಕಾರ್ ಮಾತನಾಡಿ "ಪ್ರತಿಯೊಂದು ಧರ್ಮದವರೂ ತಮ್ಮ ತಮ್ಮ ಧರ್ಮಗಳನ್ನು ಅರಿತು ಅದರಂತೆ ನಡೆದರೆ ಖಂಡಿತ ಇಲ್ಲಿ ಅಶಾಂತಿ ಮೂಡಲು ಸಾಧ್ಯವಿಲ್ಲ. ಯಾಕೆಂದರೆ ಧರ್ಮ ಕೋಮುವಾದವನ್ನು ಕಲಿಸುವುದಿಲ್ಲ. ಆದರೆ ನಾವು ನಮ್ಮ ಧರ್ಮವನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿರುವುದು ಒಂದು ದುರಂತ. ಪರಧರ್ಮ ಸಹಿಷ್ಣುತೆಯನ್ನು ಬೋಧಿಸಿದ ಪ್ರವಾದಿ (ಸ) ರವರನ್ನೇ ನಿಂದಿಸುವ ಅಜ್ಞಾನಿಗಳಿಗೆ ಆ ಮಹಾನ್ ಪ್ರವಾದಿಯ ಬೋಧನೆಗಳನ್ನು ತಲುಪಿಸುವುದರ ಮೂಲಕ ಅವರ ತಪ್ಪು ಕಲ್ಪನೆಗಳನ್ನು ನೀಗಿಸುವ ನಿಟ್ಟಿನಲ್ಲಿ ಯುನಿವೆಫ್ ನ ಈ ಅಭಿಯಾನ ಶ್ಲಾಘನೀಯ" ಎಂದು ಹೇಳಿದರು.
ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ವರ್ತಮಾನದ ಮುಸ್ಲಿಮ್ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ ( ಸ)" ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಿದರು. ಅಬ್ದುರ್‍ರಹ್ಮಾನ್ ಪಿ.ಟಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಯೀದ್ ಅಹ್ಮದ್ ಕಿರ್ ಅತ್ ಪಠಿಸಿದರು. ಜಿಲ್ಲಾಧ್ಯಕ್ಷ ಮತ್ತು ಸಂಚಾಲಕ ಅಬ್ದುಲ್ಲಾ ಪಾರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.