ರಸ್ತೆ ಅಪಘಾತ: ಗಾಯಗೊಂಡಿದ್ದ ಬೈಕ್ ಸವಾರ ಮೃತ್ಯು
ಮಂಗಳೂರು, ಜ.14: ನಗರದ ಹೊರವಲಯ ವಳಚ್ಚಿಲ್ ರಸ್ತೆಯಲ್ಲಿ ಬೈಕ್ ಗಳ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಅಡ್ಯಾರ್ ಕಣ್ಣೂರು ದಯಂಬ ನಿವಾಸಿ ಮುಹಮ್ಮದ್ ಸತ್ತಾರ್ (25) ಮೃತರು ಎಂದು ಗುರುತಿಸಲಾಗಿದೆ.
ಜ.12ರಂದು ಸಂಜೆ ಮುಹಮ್ಮದ್ ಸತ್ತಾರ್ ಅವರು ಕಣ್ಣೂರಿನಿಂದ ತನ್ನ ಅತ್ತಿಗೆ ಜೊತೆಗೆ ಫರಂಗಿಪೇಟೆ ಕಡೆಗೆ ತೆರಳುತ್ತಿದ್ದರು. ವಳಚ್ಚಿಲ್ ತಲುಪುತ್ತಿದ್ದಂತೆ ಫರಂಗಿಪೇಟೆ ಕಡೆಯಿಂದ ಮಂಗಳೂರು ಮಾರ್ಗವಾಗಿ ಬರುತ್ತಿದ್ದ ಬೈಕ್ ಢಿಕ್ಕಿಯಾಗಿತ್ತು. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸತ್ತಾರ್ ಹಾಗು ಅವರ ಅತ್ತೆಗೆ ಗಾಯವಾಗಿತ್ತು. ಗಾಯಾಳುಗಳನ್ನು ಕೂಡಲೇ ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸತ್ತಾರ್ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.