ವೀರಪ್ಪ ಮೊಯ್ಲಿ ವಿರುದ್ಧ ನಳಿನ್ ಹೇಳಿಕೆ ಆಧಾರರಹಿತ: ಸಚಿವ ಖಾದರ್

Update: 2019-01-16 15:01 GMT

ಮಂಗಳೂರು, ಜ.16: ವಿಜಯಾ ಬ್ಯಾಂಕ್ ವಿಲೀನದ ಕುರಿತಂತೆ ಹಣಕಾಸು ಸಮಿತಿಯ ಅಧ್ಯಕ್ಷ ವೀರಪ್ಪ ಮೊಯ್ಲಿ ಅವರ ವಿರುದ್ಧ ಸಂಸದ ನಳಿನ್ ಕುಮಾರ್ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ ಹಾಗೂ ಆಧಾರ ರಹಿತ ಸುಳ್ಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಸರ್ಕ್ಯೂಟ್‌ ಹೌಸ್‌ನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಗ್ಗೆ ಸಂಸದ ವೀರಪ್ಪ ಮೊಯ್ಲಿ ಅವರ ಜತೆ ತಾನು ಮಾತುಕತೆ ನಡೆಸಿದ್ದು, ಹಣಕಾಸು ಸಮಿತಿ ಮುಂದೆ ವಿಜಯಾ ಬ್ಯಾಂಕ್ ವಿಲೀನದ ಪ್ರಸ್ತಾಪ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದರು.

ಜವಾಬ್ಧಾರಿಯುತ ಸ್ಥಾನದಲ್ಲಿರುವ ಸಂಸದರು ಜಿಲ್ಲೆಯ ಗೌರವದ ಪ್ರತೀಕವಾಗಿರುವ ವಿಜಯಾ ಬ್ಯಾಂಕ್‌ನ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಎರಡು ಜಿಲ್ಲೆಗಳ ಪ್ರತಿನಿಧಿಗಳ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ದು ಒತ್ತಡ ತರುವ ಪ್ರಯತ್ನ ಮಾಡಬೇಕಾಗಿತ್ತು. ಅದು ಬಿಟ್ಟು ವಿಲೀನ ಪ್ರಕ್ರಿಯೆ ಬಗ್ಗೆ ಆರು ತಿಂಗಳ ಹಿಂದೆಯೇ ಮುನ್ಸೂಚನೆ ಇದ್ದರೂ ಹೆಸರು ಉಳಿಸಲು ಪ್ರಯತ್ನಿಸದೆ ಬೇರೆ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸುವುದು ಸರಿಯಲ್ಲ. ಹಣಕಾಸು ಸಮಿತಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿದೆ ಎಂದು ಹೇಳಿರುವ ಸಂಸದರು ಸಭಾ ನಡವಳಿಯನ್ನು ಸಾಕ್ಷಿ ಸಮೇತವಾಗಿ ಒದಗಿಸಲಿ. ಈ ರೀತಿ ಜನರಲ್ಲಿ ಗೊಂದಲ ಮೂಡಿಸುವುದು, ವಿಜಯಾ ಬ್ಯಾಂಕ್ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ವಿಜಯಾ ಬ್ಯಾಂಕ್ ವಿಲೀನಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ವ್ಯಕ್ತವಾದ ಪ್ರತಿರೋಧದ ಕುರಿತಂತೆ ಸಂಸದ ವೀರಪ್ಪ ಮೊಯ್ಲಿಯವರು ಈಗಾಗಲೇ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದಿರುವುದಾಗಿ ಹಾಗೂ ಸಂಸದ ನಳಿನ್ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಹಸಿ ಸುಳ್ಳು ಯಾಕೆ ಹೇಳಿರುವುದು ಎಂಬುದಾಗಿ ನಳಿನ್ ಕುಮಾರ್‌ರವರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಖಾದರ್ ಹೇಳಿದರು.

ಪ್ರಕೃತಿ ವಿಕೋಪ: ಜಿಲ್ಲೆಗೆ 58 ಕೋಟಿ ರೂ. ಬಿಡುಗಡೆ

ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿ ರಾಜ್ಯ ಸರಕಾರಕ ಜಿಲ್ಲೆಗೆ 58 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದು, ಇದೇ ಮೊದಲು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಜಿಲ್ಲೆಗೆ ಅತೀ ಹೆಚ್ಚು ಅನುದಾನ ದೊರಕಿದೆ ಎಂದರು.

ಬಜೆಟ್ ಪೂರ್ವ ಸಭೆಯನ್ನು ಇತ್ತೀಚೆಗೆ ನಡೆಸಲಾಗಿದ್ದು, ಸಭೆಯಲ್ಲಿ ಪ್ರಸ್ತಾಪವಾದ ವಿಚಾರಗಳನ್ನು ಸಂಬಂಧಪಟ್ಟ ಇಲಾಖೆ ಹಾಗೂ ಸಚಿವಾಲಯಕ್ಕೆ ತಲುಪಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

ಗೋಷ್ಠಿಯಲ್ಲಿ ಈಶ್ವರ್ ಉಳ್ಳಾಲ್, ಸಂತೋಷ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News