'ಅಪರೇಶನ್ ಕಮಲ' ಬಿಜೆಪಿಯವರ ಪ್ರಯತ್ನ ವ್ಯರ್ಥ: ಸಚಿವ ಖಾದರ್

Update: 2019-01-16 15:40 GMT

ಮಂಗಳೂರು, ಜ.16: ರಾಜ್ಯ ಸರಕಾರಕ್ಕೆ ಯಾವುದೇ ಅಡಚಣೆ ಇಲ್ಲವಾಗಿದ್ದು, ಬಿಜೆಪಿಯವರು ಸರಕಾರದ ವಿರುದ್ಧ ನಡೆಸುತ್ತಿರುವ ಪ್ರಯತ್ನ ವ್ಯರ್ಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, ಬಿಬಿಎಂಪಿ ಚುನಾವಣೆಯಲ್ಲಿ 4 ಕಾರ್ಪೊರೇಟರ್‌ಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗದ ಬಿಜೆಪಿಯವರು 15 ಮಂದಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯದ್ದು ಏನಿದ್ದರೂ ಟೆಸ್ಟ್‌ ಮ್ಯಾಚ್, ನಮ್ಮದ್ದು ವನ್ ಡೇ ಮ್ಯಾಚ್ ಎಂದು ಹೇಳಿದ ಅವರು, ರಾಜ್ಯದಲ್ಲಿ 150ಕ್ಕೂ ಅಧಿಕ ತಾಲೂಕುಗಳು ಬರಪೀಡಿತವಾಗಿರುವಾಗ, ಬಜೆಟ್‌ಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕಾದವರು ರೆಸಾರ್ಟ್‌ನಲ್ಲಿ ಕುಳಿತುಕೊಂಡು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಪಕ್ಷದಲ್ಲಿನ ಅತೃಪ್ತರ ಮನವೊಲಿಸಲು ಪಕ್ಷದ ವರಿಷ್ಠರು ತಮ್ಮಿಂದ ಸಚಿವ ಸ್ಥಾನ ತ್ಯಾಗ ಮಾಡಲು ಕೇಳಿಕೊಂಡಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಅಂತಹ ಪ್ರಸ್ತಾಪ ಬಂದಿಲ್ಲ. ಆದರೆ, ಹೆಸರು, ಅಧಿಕಾರ ನನಗೆ ದೊರಕಿರುವುದು ಪಕ್ಷದಿಂದ. ಹಾಗಾಗಿ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.

ಜನರನ್ನು ವಿಭಜನೆ ಮಾಡದಂತಹ ಸುಭದ್ರ ಸರಕಾರ ನಮಗೆ ಅಗತ್ಯವಿದೆ. ಅದರ ಎದುರು ನಮ್ಮ ಅಧಿಕಾರ, ಹೆಸರು ಏನೇನೂ ಅಲ್ಲ. ಪಕ್ಷದ ಕೆಲವರಲ್ಲಿ ಸಣ್ಣ ಮಟ್ಟಿನ ಅಸಮಾಧಾನ ಇರಬಹುದು. ಅವರನ್ನು ಅತೃಪ್ತರೆಂದು ಹೇಳಲಾಗದು ಎಂದವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News