ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಗೋಪಿಚಂದರಾವ್ ನಿಧನ
ಉಡುಪಿ, ಜ.16: ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ, ಹಿಂದಿ ಭಾಷೆಯ ಪ್ರಚಾರ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಎಸ್. ಗೋಪಿಚಂದ ರಾವ್(87) ಅಲ್ಪಕಾಲದ ಅಸ್ವಾಸ್ಥದ ನಂತರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯವರ್ಗ ವನ್ನು ಅಗಲಿಸಿದ್ದಾರೆ.
ಉಡುಪಿಯ ಪಣಿಯಾಡಿ ನಿವಾಸಿಯಾಗಿದ್ದ ಇವರು ಕನ್ನಡ, ಹಿಂದಿ, ಸಂಸ್ಕೃತ ತ್ರಿಭಾಷಾ ಪಂಡಿತರಾಗಿ ಗುರುತಿಸಿಕೊಂಡಿದ್ದರು. ಗೋರಾ ಎಂಬ ಕಾವ್ಯನಾಮ ದಲ್ಲಿ ಕಥಾಕೌಮುದಿ, ಬಿರಿದ ಮುಗುಳು, ಹಸುರು ಕನಸು, ವೀರಜನನಿ, ನಗೆಗಡಲು ಇನ್ನೂ ಮುಂತಾದ ಸಾಹಿತ್ಯ ಕೃತಿಗಳನ್ನು ರಚಿಸಿದ್ದರು. ನವಯುಗ ಪತ್ರಿಕೆಯಲ್ಲಿ 25 ವರ್ಷಕಾಲ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ನಾಡಿನ ಅನೇಕ ಪತ್ರಿಕೆಗಳಲ್ಲೂ ಇವರ ಲೇಖನ ಪ್ರಕಟವಾಗಿತ್ತು.
ಪೆರ್ಡೂರು, ನಿಟ್ಟೂರು ಹಾಗೂ ಯು.ಕಮಲಾ ಬಾಯಿ ಪ್ರೌಢಶಾಲೆಯಲ್ಲಿ ಸುದೀರ್ಘ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ತಾಲೂಕಿನ ಶಿರ್ವ ಮಾಣಿಬೆಟ್ಟು ಮೂಲದ ಗೋಪಿಚಂದ ರಾವ್, ಸ್ಥಾನಿಕ ಸೇವಾ ಸಮಾಜ ಮತ್ತು ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಕಲಾವೃಂದ, ಗೀತಾಭವನದ ಕಾರ್ಯದರ್ಶಿ ಯಾಗಿ, ಉಡುಪಿಯ ಹಿಂದಿ ಪ್ರಚಾರ ಪರಿಷತ್, ಮಾರುತಿ ಗ್ರಂಥಾಲಯ, ರಾತ್ರಿಶಾಲೆ ಸ್ಥಾಪನೆಯಲ್ಲೂ ಮಹತ್ವದ ಪಾತ್ರವಹಿಸಿದ್ದರು. ಉಡುಪಿ ಪೇಜಾವರ ಮಠದ ಪ್ರಹ್ಲಾದ ಗುರುಕುಲದ ಸಂಸ್ಥಾಪಕ ಪ್ರಾಂಶುಪಾಲರಾಗಿದ್ದರು.
ಇವರ ಸಾಂಸ್ಕೃತಿಕ ಸೇವೆಯನ್ನು ಗಮನಿಸಿ ಹೊಸದಿಲ್ಲಿಯ ಬೋರ್ಡ್ ಆಫ್ ಹೈಯರ್ ಎಜ್ಯುಕೇಷನ್ ಸಂಸ್ಥೆಯು ಸಾಹಿತ್ಯವಾಚಸ್ಪತಿ ಮತ್ತು ವಿದ್ಯಾವಾಚಸ್ಪತಿ ಪ್ರಶಸ್ತಿ ನೀಡಿ ಗೌರವಿಸಿದೆ.