ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಸುಳ್ಳು; ಸ್ಪಷ್ಟನೆ
ಉಡುಪಿ, ಜ.16: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಸಿವಿಲ್) 190 ಹುದ್ದೆಗಳ ನೇಮಕಾತಿ ಸಲುವಾಗಿ ನೇಮಕಾತಿ ಪ್ರಕ್ರಿಯೆಯನ್ವಯ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ಜ.13ರಂದು ಬೆಂಗಳೂರು ನಗರ, ಮೈಸೂರು ನಗರ, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು.
ಈ ಲಿಖಿತ ಪರೀಕ್ಷೆಯ ಸಂಬಂಧ ಕೆಲವೊಂದು ಮಾಧ್ಯಮಗಳಲ್ಲಿ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿರುವ ಬಗ್ಗೆ ವರದಿ ಬಂದಿವೆ. ಆದರೆ ಇದು ಕೇವಲ ವದಂತಿಯಾಗಿದ್ದು, ಕೆಲವು ವಂಚನೆಕೋರರು ಅಭ್ಯರ್ಥಿಗಳಿಗೆ ಮೋಸ ಮಾಡುವ ಸಲುವಾಗಿ ಪಿಎಸ್‌ಐ(ಸಿವಿಲ್) ಹುದ್ದೆಯ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ನಮ್ಮಲ್ಲಿ ಲಭ್ಯವಿರುವುದಾಗಿ ನಂಬಿಸಿ, ಹಣಕ್ಕಾಗಿ ಅಭ್ಯರ್ಥಿಗಳನ್ನು ತಪ್ಪು ದಾರಿಗೆಳೆಯುವ ಸಂಚು ರೂಪಿಸಿ, ವಂಚನೆ ಮಾಡುವ ದೃಷ್ಟಿಯಿಂದ ಅಭ್ಯರ್ಥಿಗಳಿಗೆ ದಿಕ್ಕು ತಪ್ಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲವೊಂದು ವಂಚನೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೇಲಿನ ಪರೀಕ್ಷೆಯು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆದಿದೆ. ಆದ್ದರಿಂದ ಅಭ್ಯರ್ಥಿಗಳು ಯಾವುದೇ ಸುಳ್ಳು ವದಂತಿಗೆ ಕಿವಿಕೊಡದೆ ಸಮಾಧಾನ ದಿಂದಿರಬೇಕೆಂದು ಮತ್ತು ಆತಂಕ ಪಡುವ ಅಗತ್ಯವಿಲ್ಲವೆಂದು ಅಡಿಷನಲ್ ಡೈರೆಕ್ಟರ್ ಜನರಲ್ ಆಪ್ ಪೊಲೀಸ್ ರಾಘವೇಂದ್ರ ಔರಾದ್‌ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.