ಹಾಕಿ ವಿಶ್ವಕಪ್ ಚಾಂಪಿಯನ್ ಬೆಲ್ಜಿಯಂ ಬೆಟ್ಟಿಂಗ್ ‌ನಲ್ಲಿ ಭಾಗಿ?

Update: 2019-01-16 16:05 GMT

ಬ್ರಸ್ಸಲ್ಸ್, ಜ.16: ಹಾಕಿ ವಿಶ್ವಕಪ್‌ನ ಹಾಲಿ ಚಾಂಪಿಯನ್ ಬೆಲ್ಜಿಯಂ ಬೆಟ್ಟಿಂಗ್ ‌ನಲ್ಲಿ ಭಾಗಿಯಾದ ಆರೋಪಕ್ಕೆ ಸಿಲುಕಿದೆ. ಆ ತಂಡದ ಕನಿಷ್ಠ ಮೂವರು ಆಟಗಾರರು ಮೋಸದಾಟದಲ್ಲಿ ಭಾಗಿಯಾದ ಶಂಕೆ ಎದುರಿಸುತ್ತಿದ್ದಾರೆ ಎಂದು ಫ್ರಾನ್ಸ್ ದಿನಪತ್ರಿಕೆ ವರದಿ ಮಾಡಿವೆ.

 ಬೆಲ್ಜಿಯಂ ತಂಡ 2015ರಿಂದ 2018ರ ತನಕದ ಪ್ರಮುಖ ಟೂರ್ನಿಗಳಾದ ವಿಶ್ವ ಚಾಂಪಿಯನ್‌ಶಿಪ್, ಬೆಲ್ಜಿಯಂ ಲೀಗ್, ಯುರೋ ಹಾಕಿ ಲೀಗ್ ಹಾಗೂ ವಿಶ್ವಕಪ್ ಸಹಿತ ಸುಮಾರು 20 ಹಾಕಿ ಪಂದ್ಯಗಳಲ್ಲಿ ಆಟಗಾರರು ಅಥವಾ ಸಿಬ್ಬಂದಿ ಅಕ್ರಮ ಬೆಟ್ಟಿಂಗ್‌ ನಲ್ಲಿ ಭಾಗಿಯಾದ ಬಗ್ಗೆ ತನಿಖೆ ಎದುರಿಸಬಹುದು ಎಂದು ಬೆಲ್ಜಿಯಂ ಮಾಧ್ಯಮಗಳ ಮಂಗಳವಾರ ಬಹಿರಂಗಪಡಿಸಿವೆ.

ಈ ವಿಚಾರಕ್ಕೆ ಸಂಬಂಧಿಸಿ ಬೆಲ್ಜಿಯಂ ಗ್ಯಾಂಬ್ಲಿಂಗ್ ಕಮಿಶನ್, ರಾಯಲ್ ಬೆಲ್ಜಿಯಂ ಹಾಕಿ ಸಂಸ್ಥೆಗೆ 2015ರಿಂದ ಇತ್ತೀಚೆಗೆ ಕೊನೆಗೊಂಡ ವಿಶ್ವಕಪ್ ತನಕದ ಪಂದ್ಯಗಳ ಪಟ್ಟಿ ನೀಡುವಂತೆ ಕೇಳಿಕೊಂಡಿದೆ. ಬೆಲ್ಜಿಯಂನ ನಿರ್ದಿಷ್ಟ ಆಟಗಾರರ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವ ಸಂಬಂಧ ನಮಗೆ ಯಾವುದೇ ಮಾಹಿತಿಯಿಲ್ಲ. ಜೂಜು ನಿಯಂತ್ರಣ ಮಂಡಳಿಯಿಂದ ಮಾಹಿತಿಗಾಗಿ ಮನವಿ ಬಂದಿದೆ.

ಬೆಟ್ಟಿಂಗ್‌ನಲ್ಲಿ ಎಷ್ಟು ಮಂದಿ ಆಟಗಾರರು ಭಾಗಿಯಾಗಿದ್ದಾರೆ. ಅವರ ಹೆಸರೇನೆಂದು ಗೊತ್ತಿಲ್ಲ ಎಂದು ರಾಯಲ್ ಬೆಲ್ಜಿಯಂ ಹಾಕಿ ಅಸೋಸಿಯೇಶನ್ ತಿಳಿಸಿದೆ.

ಮಾಧ್ಯಮಗಳ ವರದಿಯನ್ನು ಆಧರಿಸಿ ನಾವು ಬೆಲ್ಜಿಯಂ ಹಾಕಿ ಸಂಸ್ಥೆಯನ್ನು ಸಂಪರ್ಕಿಸಿದ್ದೇವೆ. ಸಂಪೂರ್ಣ ಸಹಕಾರ ಹಾಗೂ ಪಾರದರ್ಶಕತೆಯಿಂದ ಇದನ್ನು ನಿಭಾಯಿಸುವ ಪೂರ್ಣ ವಿಶ್ವಾಸ ನಮಗಿದೆ ಎಂದು ಎಫ್‌ಐಎಚ್ ಹಿರಿಯ ಮ್ಯಾನೇಜರ್ ನಿಕೊಲಸ್ ಮೈಂಗೊಟ್ ಹೇಳಿದ್ದಾರೆ.

ಬೆಲ್ಜಿಯಂ ತಂಡ ಶನಿವಾರ ಆತಿಥೇಯ ಸ್ಪೇನ್ ವಿರುದ್ಧ ಪ್ರೊ ಲೀಗ್‌ನ ಉದ್ಘಾಟನಾ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News