ಸಂಸದೀಯ ಕಾರ್ಯದರ್ಶಿಗಳ ಹುದ್ದೆಗೆ ಶಾಸಕರ ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2019-01-16 16:21 GMT

ಬೆಂಗಳೂರು, ಜ.16: ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿಗಳ ಹುದ್ದೆಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನೇಮಿಸಿದ ಮುಖ್ಯಮಂತ್ರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ್, ಕೌಜಲಗಿ ಮಹಂತೇಶ್ ಶಿವಾನಂದ, ರೂಪಕಲಾ ಎಂ.ಶಶಿಧರ್, ರಾಘವೇಂದ್ರ ಬಸವರಾಜ್ ಹಿಟ್ನಾಳ್, ಡಿ.ಎಸ್.ಹೂಲಗೇರಿ, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬರ್, ಐವಾನ್ ಡಿಸೋಜಾ ಮತ್ತು ಕೆ.ಗೋವಿಂದರಾಜ್ ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇಮಿಸಿದ್ದರು. ಈ ಸಂಬಂಧ ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ 2009ರ ಜ.7ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಜಯನಗರ ನಿವಾಸಿ ಎಂ.ಬಿ.ಆದಿನಾರಾಯಣ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯು ಸಂವಿಧಾನದ ಪರಿಚ್ಛೇದ 164(1-ಎ)ಕ್ಕೆ ವಿರುದ್ಧವಾಗಿದೆ. ಹೀಗಾಗಿ, ಐವಾನ್ ಡಿಸೋಜಾ ಹಾಗೂ ಇತರರನ್ನು ಸಂಸದೀಯ ಕಾರ್ಯದರ್ಶಿಗಳ ಹುದ್ದೆಯಿಂದ ವಜಾಗೊಳಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಅಲ್ಲದೆ, ಅರ್ಜಿ ಇತ್ಯರ್ಥವಾಗುವರೆಗೆ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಿ ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.

ಅರ್ಜಿಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಮತ್ತು ಐವಾನ್ ಡಿಸೋಜಾ ಸೇರಿದಂತೆ ನೂತನ ಸಂಸದೀಯ ಕಾರ್ಯದರ್ಶಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News