ನಾಪತ್ತೆಯಾದ 7 ಮೀನುಗಾರರ ಕುಟುಂಬದಿಂದ ಉಡುಪಿ ಅನಂತೇಶ್ವರದಲ್ಲಿ ಪವಮಾನ ಸೂಕ್ತಯಾಗ

Update: 2019-01-16 16:27 GMT

ಉಡುಪಿ, ಜ.16: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರು, ಸುವರ್ಣ ತ್ರಿಭುಜ ಬೋಟಿನೊಂದಿಗೆ ನಾಪತ್ತೆಯಾಗಿ 32 ದಿನ ಸಂದಿದ್ದು, ಸತತ ಪ್ರಯತ್ನದ ಬಳಿಕವೂ ಇದುವರೆಗೆ ಯಾವುದೇ ಸುಳಿವು ಸಿಗದೇ ಉಡುಪಿಯ ಎರಡು ಹಾಗೂ ಉತ್ತರ ಕನ್ನಡದ ಐದು ಕುಟುಂಬಗಳು ಕಂಗೆಟ್ಟಿವೆ.

ಇದೀಗ ಈ ಕುಟುಂಬಗಳು ಕಾದು ಕಾದು ಹತಾಶರಾಗಿ ದೇವರು, ದೈವಗಳ ಮೊರೆ ಹೋಗುತಿದ್ದಾರೆ. ಈ ನಿಟ್ಟಿನಲ್ಲಿ ನಾಪತ್ತೆಯಾಗಿರುವ ಎಲ್ಲಾ ಏಳು ಮೀನುಗಾರರ ಕುಟುಂಬಸ್ಥರು ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವಸ್ಥಾನದಲ್ಲಿ ಬುಧವಾರ ಪವಮಾನ ಸೂಕ್ತ ಯಾಗ ನೇರವೇರಿಸಿದರು.

ದೇವಸ್ಥಾನದ ಪ್ರದಾನ ಅರ್ಚಕ ವೇದವ್ಯಾಸ ಐತಾಳ್ ಅವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ, ವಾಯುದೇವರ ಪ್ರೀತಿಗಾಗಿ ಪವಮಾನ ಸೂಕ್ತ ಹೋಮ ನಡೆಯಿತು. ಕೃಷ್ಣ ಮಠ, ಚಂದ್ರೇಶ್ವರ ದೇವಸ್ಥಾನದಲ್ಲಿ ಮೀನುಗಾರರು ಸುರಕ್ಷಿತವಾಗಿ ಮರಳಲಿ ಎಂದು ಕುಟಂಬ ವರ್ಗದವರು ಪ್ರಾರ್ಥನೆ ಸಲ್ಲಿಸಿದರು.

ಉತ್ತರ ಕನ್ನಡದ ಕುಮಟದ 2, ಭಟ್ಕಳದ 2 ಹಾಗೂ ಮಂಕಿಯ ಒಬ್ಬರು ಹಾಗೂ ಮಲ್ಪೆ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದು, 7 ಮಂದಿಯ ಕುಟುಂಬಸ್ಥರೂ ಇಂದಿನ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಮೀನುಗಾರರು ನಾಪತ್ತೆಯಾಗಿ ತಿಂಗಳು ಕಳೆದಿದೆ. ಕರಾವಳಿ ಕಾವಲು ಪಡೆ, ನೌಕಾಪಡೆ ಹಾಗೂ ಪೊಲೀಸ್ ಇಲಾಖೆ ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ ಫಲ ಸಿಕ್ಕಿಲ್ಲ. ಮೀನುಗಾರರಿಗೆ ದಿಕ್ಕುತೋಚುತ್ತಿಲ್ಲ. ಹಾಗಾಗಿ, ಅಂತಿಮವಾಗಿ ದೇವರ ಮೊರೆ ಹೋಗಿದ್ದೇವೆ ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.

ಗುರುವಾರ ಬೆಂಗಳೂರಲ್ಲಿ ಸಭೆ

ಗುರುವಾರ ಸಂಜೆ 4:30ಕ್ಕೆ ಬೆಂಗಳೂರಿನಲ್ಲಿ ರಾಜ್ಯ ಕರಾವಳಿ ತೀರದ ಭದ್ರತೆ ಕುರಿತಂತೆ ಮೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿ ಗಳು, ನೌಕಾ ಪಡೆಯ ಅಧಿಕಾರಿಗಳು ಹಾಗೂ ಕೋಸ್ಟಲ್ ಗಾರ್ಡ್‌ನ ಅಧಿಕಾರಿಗಳ ಸಭೆ ನಡೆಯಲಿದ್ದು, ಇದರಲ್ಲಿ ಮೀನುಗಾರರ ನಾಪತ್ತೆ ಪ್ರಕರಣವೂ ಚರ್ಚೆಗೆ ಬರುವ ನಿರೀಕ್ಷೆ ಇದೆ. ಹೀಗಾಗಿ ಇದರಲ್ಲಿ ಭಾಗವಹಿಸಲು ಸಿದ್ಧರಾಗಿರುವಂತೆ ಮೀನುಗಾರರ ಪ್ರತಿನಿಧಿಗಳಿಗೆ ಆಹ್ವಾನಿಸಲಾಗಿದೆ ಎಂದು ಸತೀಶ್ ಕುಂದರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News