ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕ ದುರ್ಬಲರಿಗೆ ಮೀಸಲಾತಿ: ಜಾವಡೇಕರ್

Update: 2019-01-16 17:39 GMT

ಹೊಸದಿಲ್ಲಿ,ಜ.16: 2019-20ನೇ ಶೈಕ್ಷಣಿಕ ವರ್ಷದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ಕಾಲೇಜುಗಳು ಮತ್ತು ವಿವಿಗಳಲ್ಲಿ ಸಾಮಾನ್ಯ ವರ್ಗದಲ್ಲಿಯ ಆರ್ಥಿಕವಾಗಿ ದುರ್ಬಲರಿಗೆ ಶೇ.10 ಮೀಸಲಾತಿಯನ್ನು ಜಾರಿಗೊಳಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಹೇಳಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಈ ಮೀಸಲಾತಿಯು ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳಿಗೆ ಹಾಲಿ ಇರುವ ಕೋಟಾಕ್ಕೆ ವ್ಯತಿರಿಕ್ತವಾಗಿರಲಿದೆ ಎಂದರು. ಆದರೆ ಹಾಲಿ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಗಳಿಗೆ ಮೀಸಲಾತಿಯನ್ನು ಒದಗಿಸಲು ನೂತನ ಶಾಸನ ಅಥವಾ ಕಾರ್ಯಕಾರಿ ಆದೇಶವೊಂದನ್ನು ಹೊರಡಿಸಲಾಗುವುದೇ ಎನ್ನುವುದು ಸ್ಪಷ್ಟವಾಗಿಲ್ಲ.

ದೇಶದಲ್ಲಿಯ 40,000 ಕಾಲೇಜುಗಳು ಮತ್ತು 900 ವಿವಿಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳುವ ಮೂಲಕ ಜಾವಡೇಕರ್ ಅವರು ಈ ಮೀಸಲಾತಿ ವ್ಯಾಪ್ತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೂ ಬರುತ್ತವೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಕ್ರಮದ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿ ಕೋಟಾಗಳನ್ನೂ ಕಡ್ಡಾಯಗೊಳಿಸಲಾಗುವುದು ಎಂದು ಅವರು ತಿಳಿಸಿ ಮಾಹಿತಿಯನ್ನು ತಮ್ಮ ಪ್ರಾಸ್ಪೆಕ್ಟಸ್‌ಗಳಲ್ಲಿ ಸೇರ್ಪಡೆಗೊಳಿಸುವಂತೆ ಕಾಲೇಜುಗಳಿಗೆ ಸೂಚಿಸಲಾಗುವುದು. ಮೀಸಲಾತಿಯನ್ನು ಜಾರಿಗೊಳಿಸಲು ಯುಜಿಸಿ ಮತ್ತು ಎಐಸಿಟಿಇಗಳಿಗೆ ವಾರದೊಳಗೆ ಕಾರ್ಯಾಚರಣೆ ಆದೇಶವನ್ನು ಹೊರಡಿಸಲಾಗುವುದು ಎಂದು ಹೇಳಿದರು.

ಆರ್ಥಿಕವಾಗಿ ದುರ್ಬಲರಿಗೆ ಒಟ್ಟು ವಾರ್ಷಿಕ ಕೌಟುಂಬಿಕ ಆದಾಯ ಮಿತಿಯನ್ನು ಎಂಟು ಲ.ರೂ.ಗಳಿಗೆ ನಿಗದಿಗೊಳಿಸಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

93ನೇ ಸಂವಿಧಾನ ತಿದ್ದುಪಡಿಯು ಒಬಿಸಿಗಳಿಗೆ ಖಾಸಗಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.27 ಮೀಸಲಾತಿಯನ್ನು ಒದಗಿಸಲು ಅವಕಾಶ ನೀಡಿದ್ದರೆ,2006ರ ಕೇಂದ್ರ ಶಿಕ್ಷಣ ಸಂಸ್ಥೆಗಳ ತಿದ್ದುಪಡಿ ಕಾಯ್ದೆಯು ಕೇಂದ್ರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಒಬಿಸಿ ಕೋಟಾ ಜಾರಿಯನ್ನು ಕಡ್ಡಾಯಗೊಳಿಸಿದೆ. ಹಲವಾರು ರಾಜ್ಯಗಳಲ್ಲಿಯ ಖಾಸಗಿ ಶಿಕ್ಷಣ ಸಂಸ್ಥೆಗಳು ಒಬಿಸಿ ಮೀಸಲಾತಿಯನ್ನು ಜಾರಿಗೊಳಿಸಿಲ್ಲ.

ಏಳನೇ ಕೇಂದ್ರ ವೇತನ ಆಯೋಗ

ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಈಗ ರಾಜ್ಯ ಸರಕಾರದ ಮತ್ತು ರಾಜ್ಯ ಸರಕಾರದಿಂದ ಅನುದಾನಿತ ಪದವಿ ಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಇತರ ಶೈಕ್ಷಣಿಕ ಸಿಬ್ಬಂದಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದೂ ಜಾವಡೇಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News