ವಿಟಮಿನ್ ಕೊರತೆಯನ್ನು ಸೂಚಿಸುವ ಈ ಲಕ್ಷಣಗಳು ನಿಮ್ಮ ಗಮನದಲ್ಲಿರಲಿ…

Update: 2019-01-17 14:39 GMT

ವಿಟಮಿನ್ಗಳು ನಮ್ಮ ಶರೀರಕ್ಕೆ ಅಗತ್ಯವಾಗಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿವೆ. ಬೆಳವಣಿಗೆಗೆ ಮತ್ತು ಕಾಯಿಲೆಗಳ ವಿರುದ್ಧ ನಮಗೆ ರಕ್ಷಣೆ ನೀಡಲು ವಿಟಮಿನ್ಗಳು ಅಗತ್ಯವಾಗಿವೆ. ವಿಟಮಿನ್ಗಳನ್ನು ಹೀರಿಕೊಳ್ಳಲು ನಮ್ಮ ಶರೀರವು ವಿಫಲಗೊಂಡಾಗ ಅಥವಾ ಆಹಾರಗಳಿಂದ ಅಗತ್ಯ ವಿಟಮಿನ್ಗಳು ಲಭಿಸದಿದ್ದಾಗ ವಿಟಮಿನ್ ಕೊರತೆಯು ಕಾಣಿಸಿಕೊಳ್ಳುತ್ತದೆ. ಇದನ್ನು ನೀಗಿಸದಿದ್ದರೆ ಅಜೀರ್ಣ,ಚರ್ಮರೋಗ,ಕುಪೋಷಣೆ ಮತ್ತು ದೈಹಿಕ ವಿರೂಪ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲರೂ ತಿಳಿದಿರಲೇಬೇಕಾದ, ವಿಟಮಿನ್ ಕೊರತೆಯನ್ನು ಸೂಚಿಸುವ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ.....

► ಪೆಡಸುಗೊಂಡ ಕೂದಲು ಮತ್ತು ಉಗುರುಗಳು

ತಲೆಗೂದಲು ಮತ್ತು ಉಗುರುಗಳು ಪೆಡಸಾಗುವುದಕ್ಕೆ ಹಲವಾರು ಕಾರಣಗಳಿದ್ದು,ಸಾಮಾನ್ಯವಾಗಿ ಬಯಾಟಿನ್ ಎಂದು ಕರೆಯಲಾಗುವ ವಿಟಮಿನ್ ಬಿ7 ಕೊರತೆಯು ಅವುಗಳಲ್ಲೊಂದಾಗಿದೆ. ಕಾರ್ಬೊ ಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟಿನ್ ‌ಗಳ ಚಯಾಪಚಯಕ್ಕೆ ಅಗತ್ಯವಾಗಿರುವ ಈ ವಿಟಮಿನ್ ಆಹಾರವನ್ನು ಸಕ್ಕರೆ,ಲಿಪಿಡ್‌ಗಳು ಮತ್ತು ಅಮಿನೊ ಆ್ಯಸಿಡ್‌ಗಳನ್ನಾಗಿ ವಿಭಜಿಸುತ್ತದೆ. ಚರ್ಮ ಮತ್ತು ತಲೆಗೂದಲ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿಯೂ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಬಯಾಟಿನ್ ಕೊರತೆಯುಂಟಾಗುವುದು ಅತಿ ಅಪರೂಪ,ಆದರೆ ಕೊರತೆಯುಂಟಾದರೆ ಅದು ತಲೆಗೂದಲು ತೆಳುವಾಗಲು ಅಥವಾ ಒಡೆಯಲು ಮತ್ತು ಉಗುರುಗಳು ಪೆಡಸಾಗಲು ಕಾರಣವಾಗುತ್ತದೆ. ಧೂಮ್ರಪಾನಿಗಳು,ಅತಿಯಾದ ಮದ್ಯಪಾನಿಗಳು,ಗರ್ಭಿಣಿಯರು ಅಥವಾ ಜೀರ್ಣಾಂಗ ರೋಗಗಳಿಂದ ಬಳಲುತ್ತಿರುವವರು ಈ ವಿಟಮಿನ್ ಕೊರತೆಯುಂಟಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಸುದೀರ್ಘ ಕಾಲ ಆ್ಯಂಟಿಬಯಾಟಿಕ್‌ ಗಳ ಬಳಕೆಯೂ ಬಯಾಟಿನ್ ಕೊರತೆಯನ್ನುಂಟು ಮಾಡುತ್ತದೆ. ಹಸಿಮೊಟ್ಟೆಯನ್ನು ಸೇವಿಸುವವರನ್ನೂ ಈ ಕೊರತೆಯು ಕಾಡುತ್ತದೆ.

► ಬಾಯಿ ಹುಣ್ಣುಗಳು

ಬಾಯಿಯಲ್ಲಿ ಮತ್ತು ಅದರ ಸುತ್ತಮುತ್ತ ಹುಣ್ಣುಗಳು ವಿಟಮಿನ್ ಗಳು ಮತ್ತು ಖನಿಜಗಳ ಕೊರತೆಯನ್ನು ಸೂಚಿಸುತ್ತವೆ. ಬಾಯಿಯಲ್ಲಿ ಆಗಾಗ್ಗೆ ಹುಣ್ಣುಗಳು ಕಾಣಿಸಿಕೊಳ್ಳುತ್ತಿದ್ದರೆ ಅದು ಆಹಾರದಲ್ಲಿ ವಿಟಮಿನ್ ಬಿ ಅಥವಾ ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ.

► ವಸಡುಗಳಲ್ಲಿ ರಕ್ತಸ್ರಾವ

ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ಅದು ಆಹಾರದಲ್ಲಿ ವಿಟಮಿನ್ ಸಿ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್ ಸಿ ಸಮರ್ಥ ಉತ್ಕರ್ಷಣ ನಿರೋಧಕದಂತೆ ಕಾರ್ಯಾಚರಿಸುತ್ತದೆ ಮತ್ತು ಗಾಯಗಳ ಮಾಗುವಿಕೆಯಲ್ಲಿ,ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಜೀವಕೋಶಗಳಿಗೆ ಹಾನಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಶರೀರವು ವಿಟಾಮಿನ್ ಸಿ ಅನ್ನು ಉತ್ಪಾದಿಸುವುದಿಲ್ಲವಾದ್ದರಿಂದ ಆಹಾರದ ಮೂಲಕವೇ ಅದರ ಕೊರತೆಯನ್ನು ನೀಗಿಸಿಕೊಳ್ಳಬೇಕಾಗುತ್ತದೆ.

► ಕೂದಲು ಉದುರುವಿಕೆ

ತಲೆಗೂದಲು ಉದುರುವುದು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಥೈರಾಯ್ಡ್ ಹಾರ್ಮೋನ್‌ಗಳ ಕಡಿಮೆ ಮಟ್ಟ ಹಾಗೂ ಕಬ್ಬಿಣ ಮತ್ತು ಸತುವು ಕೊರತೆ ತಲೆಗೂದಲು ನಷ್ಟವಾಗಲು ಕಾರಣಗಳಾಗಿದ್ದರೂ ನಿಯಾಸಿನ್ ಅಥವಾ ವಿಟಮಿನ್ ಬಿ3 ಕೊರತೆಯೂ ತಲೆಗೂದಲು ಉದುರಲು ಕಾರಣವಾಗುತ್ತದೆ.

► ಚರ್ಮದಲ್ಲಿ ದದ್ದುಗಳು

ವಿಟಮಿನ್ ಬಿ6 ಕೊರತೆಯು ಚರ್ಮದಲ್ಲಿ ಉಂಟಾಗುವ ತುರಿಕೆಯನ್ನುಂಟು ಮಾಡುವ ದದ್ದುಗಳಿಗೆ ಕಾರಣಗಳಲ್ಲೊಂದಾಗಿದೆ. ಪೈರಿಡಾಕ್ಸಿನ್ ಎಂದು ಕರೆಯಲಾಗುವ ಈ ವಿಟಮಿನ್ ರೋಗ ನಿರೋಧಕ ಶಕ್ತಿಯ ಕಾರ್ಯ ನಿರ್ವಹಣೆ ಮತ್ತು ಚಯಾಪಚಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ಅಗತ್ಯವಾಗಿರುವ ಕೊಲಾಜೆನ್ ಎಂಬ ಚರ್ಮದ ಪ್ರೋಟಿನ್‌ನ ಸಂಶ್ಲೇಷಣೆಗೆ ಈ ವಿಟಮಿನ್ ನೆರವಾಗುತ್ತದೆ. ಶರೀರದಲ್ಲಿ ಈ ವಿಟಮಿನ್ ಬಿ6 ಕೊರತೆಯುಂಟಾದರೆ ನೆತ್ತಿ, ಮುಖ,ಕುತ್ತಿಗೆ ಮತ್ತು ಎದೆಯ ಚರ್ಮದಲ್ಲಿ ದದ್ದುಗಳಿಗೆ ಕಾರಣವಾಗುತ್ತದೆ. ನಮ್ಮ ಶರೀರವು ವಿಟಮಿನ್ ಬಿ6 ಅನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ, ಹೀಗಾಗಿ ಈ ವಿಟಮಿನ್ ಕೊರತೆಯನ್ನು ತಪ್ಪಿಸಲು ಇದನ್ನು ಒಳಗೊಂಡಿರುವ ಆಹಾರಗಳನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News