ಧರ್ಮಗಳ ಸಾಮರಸ್ಯದಿಂದ ಭಯೋತ್ಪಾದನೆ ನಾಶ: ಕೇಂಜ ಶ್ರೀಧರ ತಂತ್ರಿ

Update: 2019-01-17 14:20 GMT

ಶಿರ್ವ, ಜ.17: ವ್ಯಕ್ತಿಗಳ ನಡುವಿನ ಅವಿನಾಭಾವ ಸಂಬಂಧಗಳೇ ಸ್ನೇಹ. ಯಾವುದೇ ಮತಧರ್ಮಗಳಲ್ಲಿ ಹಿಂಸೆಗೆ ಅವಕಾಶವಿಲ್ಲ. ತನ್ನ ಧರ್ಮವನ್ನು ನಿಷ್ಠೆಯಿಂದ ಪಾಲಿಸಿ ಇತರ ಧರ್ಮವನ್ನು ಪ್ರೀತಿಸಿದಾಗ ಶಾಂತಿ, ಪ್ರೀತಿ, ವೃದ್ದಿಸುತ್ತವೆ. ಜಗತ್ತಿನ ಎಲ್ಲ ಧರ್ಮಗಳ ಸಾಮರಸ್ಯದಿಂದ ಭಯೋತ್ಪಾದನೆ ನಿರ್ಮೂಲನ ಸಾಧ್ಯ ಎಂದು ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ತಿನ ಆಗಮ ಪಂಡಿತ ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಹೇಳಿದ್ದಾರೆ.

ಶಿರ್ವ ಸುನ್ನೀ ಜಾಮಿಯಾ ಮಸೀದಿಯ 70ನೇ ಉರೂಸ್ ಸಮಾರಂಭದ ಪ್ರಯುಕ್ತ ಇತ್ತೀಚೆಗೆ ಏರ್ಪಡಿಸಲಾದ ಸರ್ವಧರ್ಮ ಸೌಹಾರ್ದ ಕೂಟದಲ್ಲಿ ಅವರು ಮಾತನಾಡುತಿದ್ದರು.

ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ರೆ.ಫಾ.ಅಶ್ವಿನ್ ಅರಾನ್ನಾ ಮಾತನಾಡಿ, ಭಾರತದಲ್ಲಿರುವ ವೈವಿಧ್ಯತೆಗಳು, ವಿವಿಧ ಭಾಷೆ, ಸಂಸ್ಕೃತಿಗಳ ಹಿನ್ನೆಲೆ ಜಗತ್ತಿನ ಯಾವ ದೇಶದಲ್ಲೂ ಇಲ್ಲ. ಎಲ್ಲಾ ಮತಧರ್ಮಗಳ ಸಾರ ಒಂದೇ ಆಗಿದ್ದು, ಅವು ದೇವರನ್ನು ಕಾಣುವ ವಿವಿಧ ದಾರಿಗಳಾಗಿವೆ ಎಂದು ತಿಳಿಸಿದರು.

ಮಾಜಿ ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಸೌರ್ಹಾದತೆಯೇ ಭಾರತದ ಮೂಲ ಸಂಸ್ಕೃತಿ. ದೇವರು ಎಂಬ ಶಕ್ತಿ ಒಂದೇ ಆಗಿದ್ದು, ಅನಾದಿ ಕಾಲದಿಂದಲೂ ಬೆಳೆದು ಬಂದಿರುವ ವಿಭಿನ್ನ ಸಂಸ್ಕೃತಿಯನ್ನು ಪಾಲಿಸುವುದೇ ದೇಶಕ್ಕೆ ಕೊಡುವ ಉತ್ತಮ ಸಂದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿರ್ವದ ಸಮಾಜ ಸೇವಕ ಅನಂತ್ರಾಯ ಶೆಣೈ ಅವರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಪೊಲಿಪು ಜುಮ್ಮಾ ಮಸೀದಿಯ ಖತೀಬ್ ಮುಹಮ್ಮದ್ ಇರ್ಷಾದ್ ಸಅದಿ ವಹಿಸಿದ್ದರು. ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಮಸೀದಿ ಅಧ್ಯಕ್ಷ ಮೊದಿನ್ ಮೊಹಮ್ಮದ್ ಶಿರ್ವ, ಕಾರ್ಯದರ್ಶಿ ಮೊಹಿದ್ದೀನ್ ಚೆಯಬ್ಬ ಉಪಸ್ಥಿತರಿದ್ದರು. ಶಿರ್ವ ಮಸೀದಿಯ ಖತೀಬ್ ವೌಲಾನಾ ಸಿರಾಜುದ್ಧೀನ್ ಝೈನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮ್ಮರ್ ಇಸ್ಮಾಯಿಲ್ ವಂದಿಸಿದರು. ಹರ್ಷದ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News