×
Ad

ನವೋದಯ ಜನಕಗೆ ‘ಸಹಕಾರ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ

Update: 2019-01-17 20:10 IST

ಮಂಗಳೂರು, ನ.17: ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನವೋದಯ ಸ್ವಸಹಾಯ ಸಂಘ ಆರಂಭಕ್ಕೆ ಕಾರಣರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ಸಹಕಾರ ಭೂಷಣ’ ಪ್ರಶಸ್ತಿಗೆ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕರ್ನಾಟಕದಲ್ಲಿ ಸುಮಾರು 35 ಸಾವಿರ ಗುಂಪುಗಳನ್ನು ರಚಿಸಿ ಮೂರುವರೆ ಲಕ್ಷ ಸದಸ್ಯರನ್ನು ಸೇರಿಸಿ ಅವರ ಬಾಳಿನಲ್ಲಿ ಬೆಳಕು ಚೆಲ್ಲಿದವರು ಡಾ. ಎಂ.ಎನ್. ರಾಜೇಂದ್ರ ಕುಮಾರ್. ಅವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಿರಂತರ 25 ವರ್ಷಗಳ ಸಾರ್ಥಕ ಅಧ್ಯಕ್ಷತೆಯನ್ನು ಪೂರೈಸಿ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಶಂತಿ ಸಮಾವೇಶ ಜ. 19ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಂಗಳೂರು ನಗರದ ಇತಿಹಾಸದಲ್ಲಿ ಇದೇ ಪ್ರಥಮವಾಗಿ ನಗರದ ನೆಹರೂ ಮೈದಾನದಲ್ಲಿ 3.53 ಲಕ್ಷ ಚದರ ಅಡಿಯ ವಿಶಾಲವಾದ ಸಭಾಂಗಣ ತಲೆ ಎತ್ತಿದೆ. ಸಭಾಂಗಣಕ್ಕೆ ಸಹಕಾರಿ ತತ್ವದ ಬೀಜ ಬಿತ್ತಿದ ವೊಳಹಳ್ಳಿ ಶಿವರಾಯರ ಹೆಸರಿಡಲಾಗಿದೆ.

ನೆಹರೂ ಮೈದಾನದ ಫುಟ್‌ಬಾಲ್ ಅಂಗಣದಲ್ಲಿ 210 ಗಣ್ಯರು ಆಸೀನರಾಗಬಹುದಾದ ವಿಶಾಲವಾದ ಪ್ರಧಾನ ವೇದಿಕೆಯ ಅದರ ಎಡ ಬಲಗಳಲ್ಲಿ ತಲಾ 150 ಮಂದಿ ಆಸೀನರಾಗಲು ಸಹಕಾರಿ ಹಾಗೂ ನವೆದಯ ವೇದಿಕೆಯನ್ನು ರಚಿಸಲಾಗಿದೆ.

ಸಿಸಿ ಕ್ಯಾಮರಾ ಕಣ್ಗಾವಲು: ಸ್ವಚ್ಛತೆಗೆ ಆದ್ಯತೆ

ಕಾರ್ಯಕ್ರಮವನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸಲು ಪೂರಕವಾಗಿ 100 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಸಭಾಂಗಣದ ಪ್ರತಿ ಇಂಚಿನಲ್ಲೂ ವೀಕ್ಷಣೆಗೆ ಸಾಧ್ಯವಾಗುವಂತೆ 25 ಎಲ್‌ಇಡಿ ಟಿವಿ ಪರದೆಗಳ ವ್ಯವಸ್ಥೆ. ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲು ಉದ್ದೇಶಿಸಲಾಗಿದ್ದು, 1000 ಸ್ವಯಂ ಸೇವಕರು, ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ ಎಂದು ಇಂದು ಕಾರ್ಯಕ್ರಮದ ಸಿದ್ಧತೆಗಳ ಕುರಿತಂತೆ ಕಾರ್ಯಕ್ರಮ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸುವ ವಿವಿಐಪಿಗಳು, ವಿಐಪಿಗಳು ಹಾಗೂ ಇತರ ಸಾರ್ವಜನಿಕರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಮಾತ್ರವಲ್ಲದೆ ಕಾರ್ಯಕ್ರಮದಂಗವಾಗಿ ಬೆಳಗ್ಗೆ 9.30ಕ್ಕೆ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮೆರವಣಿಗೆಯು ನೆಹರೂ ಮೈದಾನಕ್ಕೆ ಹೊರಡಲಿದೆ. ಈ ಸಂದರ್ಭವೂ ನಗರದ ಸಂಚಾರ ವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಪೊಲೀಸರ ಸಹಕಾರವನ್ನು ಪಡೆಯಲಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ  ಎಚ್.ಡಿ. ಕುಮಾರಸ್ವಾಮಿಯವರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಹಕಾರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿ, ರಾಷ್ಟ್ರದ ಪ್ರತಿಷ್ಠಿತ ಸಹಕಾರ ಸಂಸ್ಥೆ ಇಫ್ಕೋದ ನಿರ್ದೇಶಕರಾಗಿ ಹಳ್ಳಿಯಿಂದ ದಿಲ್ಲಿಯವರೆಗೆ ತಮ್ಮ ಸಹಕಾರ ಛಾಪು ಮೂಡಿಸಿದ್ದಾರೆ ಎಂದು ಅವರು ಹೇಳಿದರು.

ಯುವ ಸಹಕಾರಿಗಳನ್ನು ಬೆಳೆಸಿ ಅವರಿಗೆ ಶಕ್ತಿನೀಡಿ ಸಹಕಾರಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಂದ ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಗಳಲ್ಲಿ ಪ್ರತಿನಿಧಿಗಳಾಗಿ ನೂರಾರು ಜನರನ್ನು ಬೆಳೆಸಿದ್ದಾರೆ. ಅವರ ಸಹಕಾರದಿಂದ ಇಂದು ಜಿಲ್ಲೆಯ ಸಹಕಾರ ಕ್ಷೇತ್ರಗಳು ಹೆಮ್ಮರವಾಗಿ ಬೆಳೆದು ನಿಲ್ಲಲು ಸಹಕಾರಿಯಾಗಿವೆ. ಕಳೆದ 25 ವರ್ಷಗಳ ಹಿಂದೆ ಕೆಲವು ಪ್ರಾಥಮಿಕ ಸಹಕಾರಿ ಸಂಘಗಳಿಗೆ ಸ್ವಂತ ಕಟ್ಟಡವಿರಲಿಲ್ಲ.  ಇದೀಗ ಉಭಯ ಜಿಲ್ಲೆಯ 176 ಪ್ರಾಥಮಿಕ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಸಹಕಾರ ನೀಡಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಳೆದ 25 ವರ್ಷಗಳ ಹಿಂದೆ ಕೇವಲ 28 ಶಾಖೆಗಳಿದ್ದು ಇದೀಗ 105 ಶಾಖೆಗಳಾಗಿ ಪರಿವರ್ತನೆ. 64 ಕೋಟಿ ಇದ್ದ ಠೇವಣಿ ಇದೀಗ 3,812 ಕೋಟಿ ತಲುಪಿದ್ದು, 100 ಕೋಟಿ ಇದ್ದ ವ್ಯವಹಾರ ಇದೀಗ 8,892 ಕೋಟಿ ಮೀರಿದ್ದು ಇದರ ಯಶಸ್ಸು ಎಂ.ಎನ್. ರಾಜೇಂದ್ರ ಕುಮಾರ್‌ರವರ ವಿಶ್ವಾಸಾರ್ಹತೆ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆಗೆ ಸಲ್ಲುತ್ತದೆ.

ರಾಷ್ಟ್ರಕ್ಕೆ ಮಾದರಿಯಾಗಿ ಸಹಕಾರಿ ವ್ಯವಸ್ಥೆ ಅನೇಕ ಕ್ರಾಂತಿಕಾರಿ ಬದಲಾವಣೆಗೆ ರೂವಾರಿಯಾಗಿದ್ದಾರೆ. ಸತತ 105 ಶಾಖೆಯ ವ್ಯವಹಾರ, ಮೊಬೈಲ್ ಬ್ಯಾಂಕ್, ಇ-ಬ್ಯಾಂಕಿಂಗ್, ಕೋರ್ ಬ್ಯಾಂಕಿಂಗ್, ರೂಪೇ ಕ್ರೆಡಿಟ್ ಕಾರ್ಡ್, ಎ.ಟಿ.ಎಂ. ಮತ್ತು ಮಿನಿ ಎ.ಟಿ.ಎಂ.ಗಳ ಅಳವಡಿಕೆಗಳ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೊಸತನಕ್ಕೆ ಕಾರಣವಾಗಿದ್ದಾರೆ. ಸತತ 19 ವರ್ಷಗಳಿಂದ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 18 ವರ್ಷಗಳಿಂದ ನಬಾರ್ಡ್ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ಸಹಕಾರ ರತ್ನ ಪ್ರಶಸ್ತಿ, ಲಂಡನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಹಾತ್ಮಾಗಾಂಧಿ ಸಮ್ಮಾನ್ ಅಂತರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಬ್ಯಾಂಕಿಂಗ್‌ನಲ್ಲಿ ಬೆಸ್ಟ್ ಚೇರ್‌ಮೆನ್ ಪ್ರಶಸ್ತಿ ಸಹಿತ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಎಂ.ಎನ್. ರಾಜೇಂದ್ರ ಕುಮಾರ್ ಅವರ ಸಾಧನೆಗೆ ಸಂದ ಗೌರವಗಳಾಗಿವೆ ಎಂದು ದೇವಿಪ್ರಸಾದ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಪ್ರಮುಖರಾದ ರಾಜು ಪೂಜಾರಿ, ಶಶಿ ಕುಮಾರ್ ರೈ, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಸುನಿಲ್ ಕುಮಾರ್ ಬಜಗೋಳಿ, ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.

18ರಂದು ವಿಚಾರ ಸಂಕಿರಣ

ರಜತ ಸಂಭ್ರಮದ ಅಂಗವಾಗಿ ಜ. 18ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ‘ಸಹಕಾರ ಕ್ಷೇತ್ರ ಅಂದು- ಇಂದು- ಮುಂದು’, ‘ಸಹಕಾರ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು’ ಎಂಬ ವಿಚಾರದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣ ಉದ್ಘಾಟನೆಗೊಳ್ಳಲಿದೆ.

ವೈಭವದ ಮೆರವಣಿಗೆ: 61 ಕಲಾ ತಂಡಗಳು

ಬೆಳಗ್ಗೆ 9 ಗಂಟೆಗೆ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ರಜತ ಸಂಭ್ರಮವನ್ನು ಅವಿಸ್ಮರಣೀಯವಾಗಿಸಲು ಶಾಶ್ವತ ಸಹಕಾರಿ ಮ್ಯೂಸಿಯಂನ ಉದ್ಘಾಟನೆ ನಡೆಯಲಿದೆ. ಬಳಿಕ 9.30ಕ್ಕೆ ಬ್ಯಾಂಕ್ ಆವರಣದಿಂದ ಮೆರವಣಿಗೆ ಹೊರಡಲಿದೆ. ಮೆರವಣಿಗೆಯಲ್ಲಿ ಸುಮಾರು 25000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮೆರವಣಿಗೆಯಲ್ಲಿ 61 ಕಲಾ ತಂಡಗಳಿದ್ದು, 100 ಚೆಂಡೆಗಳ ಪ್ರತ್ಯೇಕ ಒಂದು ತಂಡ ವಿಶೇಷ ಆಕರ್ಷಣೆ ನೀಡಲಿದೆ.
- ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News