ಪ್ರತಿಪಕ್ಷ ನಾಯಕರ ಪ್ರಯಾಣ ನಿಷೇಧ ತೆರವುಗೊಳಿಸಿ

Update: 2019-01-17 15:16 GMT

ಇಸ್ಲಾಮಾಬಾದ್, ಜ. 17: ಪ್ರತಿಪಕ್ಷ ನಾಯಕ ಬಿಲಾವಲ್ ಭುಟ್ಟೊ ಝರ್ದಾರಿ ಮತ್ತು ಸಿಂಧ್ ಮುಖ್ಯಮಂತ್ರಿಯ ವಿರುದ್ಧ ವಿಧಿಸಲಾಗಿರುವ ಪ್ರಯಾಣ ನಿಷೇಧವನ್ನು ತೆರವುಗೊಳಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗುರುವಾರ ಪಾಕಿಸ್ತಾನ ಸರಕಾರಕ್ಕೆ ಆದೇಶ ನೀಡಿದೆ. ಅದೇ ವೇಳೆ, 3500 ಕೋಟಿ ರೂಪಾಯಿ ‘ನಕಲಿ ಖಾತೆಗಳ ಪ್ರಕರಣ’ದಲ್ಲಿ ಅವರ ಶಾಮೀಲಾತಿಯ ಬಗ್ಗೆ ತನಿಖೆ ನಡೆಸುವಂತೆ ದೇಶದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ಸೂಚಿಸಿದೆ.

ಸುಪ್ರೀಂ ಕೋರ್ಟ್ ರಚಿಸಿರುವ ಜಂಟಿ ತನಿಖಾ ತಂಡ (ಜೆಐಟಿ)ದ ಶಿಫಾರಸುಗಳಂತೆ 172 ಆರೋಪಿಗಳನ್ನು ವಿದೇಶ ಪ್ರಯಾಣಿ ನಿರ್ಬಂಧ ಪಟ್ಟಿಯಲ್ಲಿ ಇರಿಸಲಾಗಿದೆ. ಈ ಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿಗಳು ವಿದೇಶ ಪ್ರಯಾಣ ಮಾಡುವಂತಿಲ್ಲ.

ಪ್ರತಿಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಅಧ್ಯಕ್ಷ ಬಿಲಾವಲ್ ಮತ್ತು ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆಯುವಂತೆ ಸುಪ್ರೀಂ ಕೋರ್ಟ್ ತನ್ನ ವಿವರವಾದ ತೀರ್ಪಿನಲ್ಲಿ ಪಾಕಿಸ್ತಾನ ಸರಕಾರಕ್ಕೆ ಆದೇಶಿಸಿದೆ.

ಆದಾಗ್ಯೂ, 3500 ಕೋಟಿ ರೂಪಾಯಿ ‘ನಕಲಿ ಖಾತೆಗಳ ಪ್ರಕರಣ’ಕ್ಕೆ ಸಂಬಂಧಿಸಿ ಜೆಐಟಿ ಸಂಗ್ರಹಿಸಿರುವ ವರದಿ ಮತ್ತು ಮಾಹಿತಿಗಳನ್ನು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋಗೆ ವರ್ಗಾಯಿಸಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಮಾಜಿ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ, ಅವರ ಸಹೋದರಿ ಫರ್ಯಾಲ್ ತಲ್ಪುರ್ ಮತ್ತು ಇತರ ಹಲವಾರು ಮಂದಿಗೆ ಭಾರೀ ಪ್ರಮಾಣದಲ್ಲಿ ಆರ್ಥಿಕ ಪ್ರಯೋಜನಗಳನ್ನು ನೀಡಲು ಬಳಸಲಾಗಿದೆಯೆನ್ನಲಾದ ‘32 ನಕಲಿ ಖಾತೆಗಳ’ ಬಗ್ಗೆ ಜಿಐಟಿ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News