‘ದ.ಕ. ಜಿಲ್ಲೆಯ ಬಿಜೆಪಿ ಶಾಸಕರು ಪರಾರಿಯಾಗಿದ್ದಾರೆ ಹುಡುಕಿಕೊಡಿ’
ಮಂಗಳೂರು, ಜ.17: ದ.ಕ. ಜಿಲ್ಲಾ ಜನತೆಯ ಸಂಪರ್ಕಕ್ಕೆ ಸಿಗದೆ ಜಿಲ್ಲೆಯ ಬಿಜೆಪಿ ಶಾಸಕರು ದೂರದ ಪಂಚತಾರಾ ರೆಸಾರ್ಟ್‌ನಲ್ಲಿ ವಸತಿ ಹೂಡಿದ್ದು, ‘ಜಿಲ್ಲೆಯ ಬಿಜೆಪಿ ಶಾಸಕರು ಕಾಣೆಯಾಗಿದ್ದಾರೆ, ಪರಾರಿಯಾಗಿದ್ದಾರೆ, ತಪ್ಪಿಸಿಕೊಂಡಿದ್ದಾರೆ, ಓಡಿ ಹೋಗಿದ್ದಾರೆ, ನಾಪತ್ತೆಯಾಗಿದ್ದಾರೆ, ಕಣ್ಮರೆಯಾಗಿದ್ದಾರೆ ಹುಡುಕಿಕೊಡಿ’ ಎನ್ನುವ ಹೆಸರಿನ ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮೂಲಕ ಜಿಲ್ಲಾ ಡಿವೈಎಫ್‌ಐನಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
‘ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಯಾವುದೇ ಪಕ್ಷಕ್ಕೆ ಬಹುಮತದ ತೀರ್ಪನ್ನು ಕೊಟ್ಟಿಲ್ಲ. ರಾಜ್ಯದಲ್ಲಿ ಬಿಜೆಪಿ ಅತಿಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷವಾದರೂ ಬಹುಮತವನ್ನು ಸಾಬೀತುಪಡಿಸುವಲ್ಲಿ ವಿಫಲವಾಯಿತು. ಹಾಗಾಗಿ ಸಮ್ಮಿಶ್ರ ಸರಕಾರ ರಾಜ್ಯಭಾರ ಮಾಡುತ್ತಿದೆ. ರಾಜ್ಯದ ಬಿಜೆಪಿ ಶಾಸಕರು, ಮುಖಂಡರು ಆಡಳಿತದ ಚುಕ್ಕಾಣಿ ಹಿಡಿಯಲು ಶಾಸಕರನ್ನು ಕೋಟ್ಯಂತರ ರೂ. ನೀಡಿ ಖರೀದಿ ಮಾಡಲು ಹೊರಟಿರುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನವಾಗಿದೆ’ ಎಂದು ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿಯ ‘ಆಪರೇಶನ್ ಕಮಲ’ ಇಡೀ ದೇಶದಲ್ಲಿ ನಾಚಿಕೆಗೆಟ್ಟ ವ್ಯವಸ್ಥೆಯಾಗಿದ್ದು, ಹೊಲಸು ರಾಜಕಾರಣವನ್ನು ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪಕ್ಷ ಜಾರಿಗೆ ತರಲು ಮುಂದಾಗುತ್ತಿದ್ದಾರೆ. ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿಗೆ ರಾಜ್ಯದ ಜನತೆ ಸರಿಯಾದ ಉತ್ತರ ನೀಡಲಿದ್ದು, ಬಿಜೆಪಿಯ ಯಾವುದೇ ಪ್ರಯತ್ನಕ್ಕೂ ಫಲ ದೊರೆಯುವುದಿಲ್ಲ ಎಂದು ಅವರು ತಿಳಿಸಿದರು.
ದಿಲ್ಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರ ಕಾರ್ಯಕಾರಿಣಿ ಸಭೆಗೆ ತೆರಳಿದ್ದ ಬಿಜೆಪಿಯ ಶಾಸಕರು ಅಲ್ಲಿಂದ ನೇರವಾಗಿ ಹರಿಯಾಣದ ಗುರುಗ್ರಾಮದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಜಿಲ್ಲೆಯ ಜನತೆ ಶಾಸಕರ ಕಚೇರಿಗಳಿಗೆ ಕೆಲಸ ಕಾರ್ಯದ ನಿಮಿತ್ತ ಭೇಟಿ ನೀಡಿದರೆ, ಅಲ್ಲಿ ಶಾಸಕರು ಇಲ್ಲ ಎನ್ನುವ ಉತ್ತರ ಬರುತ್ತಿದೆ. ಜನತೆಯ ಜನತೆ ಮತ ಹಾಕಿ ಜನಸೇವೆ ಮಾಡಲೆಂದು ನಿಮ್ಮನ್ನು ಚುನಾಯಿಸಿದ್ದಾರೆ. ಬಿಜೆಪಿ ಶಾಸಕರು ಫಾರಂ ಕೋಳಿಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
‘ಜಿಲ್ಲೆಯ ಜನತೆಯ ಮತ ಸೇವೆ ಮಾಡುವುದಾಗಿ ಭರವಸೆ ನೀಡಿ ಅಧಿಕಾರ ಪಡೆದು ಎಳ್ಳುನೀರು ಬಿಟ್ಟಿದ್ದೀರಿ. ರೆಸಾರ್ಟ್‌ನಿಂದ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ವಾಪಸಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶಾಸಕರು ಭಯ ಪಡುವುದು ಜನತೆಗೆ ವಿನಃ ಯಡಿಯೂರಪ್ಪನ ಕುತಂತ್ರದ ರಾಜಕಾರಣಕ್ಕೆ ಅಲ್ಲ. ಜನತೆಯ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಇನ್ನೆರಡು ದಿನಗಳಲ್ಲಿ ಎಲ್ಲ ಬಿಜೆಪಿ ಶಾಸಕರ ನಿವಾಸಗಳ ಮುಂದೆ ಡಿವೈಎಫ್‌ಐನಿಂದ ಪ್ರತಿಭಟನೆ ಮಾಡುವ ಮೂಲಕ ಹೋರಾಟಕ್ಕೆ ಇಳಿಯಲಿದ್ದೇವೆ’ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಕಾರ್ಯದರ್ಶಿ ಸಂತೋಷ ಕುಮಾರ್ ಬಜಾಲ್, ಸಿಐಟಿಯು ಮುಖಂಡ ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ಸುನಿಲ್ ತೆವುಲ, ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.
‘ಮೋಜು-ಮಸ್ತಿಯಲ್ಲಿ ಸಂಜೀವ ಮಠಂದೂರು’
ಹರಿಯಾಣದ ಗುರುಗ್ರಾಮದ ರೆಸಾರ್ಟ್‌ನಲ್ಲಿ ಜಿಲ್ಲೆಯ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಸಂಜೀವ ಮಠಂದೂರು ಅವರ ಟೇಬಲ್‌ನಲ್ಲಿ ವಿದೇಶಿ ಮದ್ಯದ ಬಾಟಲಿಗಳಿದ್ದು, ಜನಸೇವೆ ಮಾಡುವ ಬದಲು ಮೋಜುಮಸ್ತಿಯಲ್ಲಿದ್ದಾರೆ. ಇಲ್ಲಿನ ಜನತೆ ಮಂಗನಕಾಯಿಲೆ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೋಜು-ಮಸ್ತಿಯಲ್ಲಿ ತೊಡಗಿರುವುದನ್ನು ಜಿಲ್ಲೆಯ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಕೆ ನೀಡಿದರು.
‘ದಕ್ಷಿಣ ಕನ್ನಡ ಸಂಘಪರಿವಾರದ ಪ್ರಯೋಗಶಾಲೆ’
ದ.ಕ. ಜಿಲ್ಲೆಯಲ್ಲಿ ಏಳು ಮಂದಿ ಬಿಜೆಪಿಯ ಜನಪ್ರತಿನಿಧಿಗಳಿದ್ದು, ಅದರಲ್ಲಿ ಆರು ಜನ ಹೊಸದಾಗಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು ಸಂಘಪರಿವಾರದ ಪ್ರಯೋಗಶಾಲೆಯಾಗಿದ್ದು, ರಾಜ್ಯದ ಚುಕ್ಕಾಣಿ ಹಿಡಿಯಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆರೋಪಿಸಿದರು.