ಬೋಟು ಸಹಿತ ಮೀನುಗಾರರ ನಾಪತ್ತೆ ಪ್ರಕರಣ: ಇಸ್ರೋ ಉಪಗ್ರಹ ತೆಗೆದ ಫೋಟೋಗಳ ಪರಿಶೀಲನೆ

Update: 2019-01-17 15:51 GMT

ಉಡುಪಿ, ಜ.17: ಇಸ್ರೋ ಉಪಗ್ರಹ ಮೂಲಕ ಡಿ.15 ಮತ್ತು 16ರಂದು ಸಮುದ್ರದಲ್ಲಿ ತೆಗೆದ ಛಾಯಾಚಿತ್ರದಲ್ಲಿ ಬೋಟುಗಳ ಸಮೂಹ ಕಂಡು ಬಂದಿದ್ದು, ಇದರಲ್ಲಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಇದೆಯೇ ಎಂಬುದರ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸುವ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ.

ಕರಾವಳಿ ಭದ್ರತೆ ಸಂಬಂಧ ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ನಡೆದ ಕರಾವಳಿಯ ಮೂರು ಜಿಲ್ಲೆಗಳ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಡಿ.15ರಂದು ಕೊಚ್ಚಿಯಿಂದ ಮಹಾರಾಷ್ಟ್ರದ ಮೂಲಕ ಸಾಗಿದ ನೌಕಾಪಡೆಯ ಹಡಗಿನ ಕೆಳಗಿನ ಭಾಗಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು, ಇದು ಸುವರ್ಣ ತ್ರಿಭುಜ ಬೋಟಿಗೆ ಢಿಕ್ಕಿ ಹೊಡೆದು ಸಂಭವಿಸಿದ ಹಾನಿಯೇ ಎಂಬುದರ ಬಗ್ಗೆ ಸಹ ಪರಿಶೀಲನೆ ನಡೆಸಲು ಸಭೆಯಲ್ಲಿ ಸೂಚಿಸಲಾಯಿತು.

ನಾಪತ್ತೆಯಾಗಿರುವ ಬೋಟು ಸಹಿತ ಮೀನುಗಾರರು ಪತ್ತೆಯಾಗುವವರೆಗೆ ಶೋಧ ಕಾರ್ಯವನ್ನು ಮುಂದುವರಿಸುವಂತೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಸಭೆಯಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಕುರಿತು ಪ್ರಕರಣ ದಾಖಲಾದ ದಿನದಿಂದ ಈವರೆಗೆ ನೌಕಪಡೆಯ ಹೆಲಿಕಾಪ್ಟರ್ ಹಾಗೂ ಹಡಗಿನ ಮೂಲಕ ನಿರಂತರ ಶೋಧ ನಡೆಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಕರ್ನಾಟಕದ ಬೋಟುಗಳಿಗೆ ದುರಸ್ತಿ, ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ಗೋವಾ, ಮಹಾರಾಷ್ಟ್ರ ಬಂದರುಗಳಿಗೆ ಪ್ರವೇಶಿಸಲು ಸ್ಥಳೀಯ ಮೀನುಗಾರರು ಅವಕಾಶ ನೀಡದ ವಿಚಾರವನ್ನು ಸತೀಶ್ ಕುಂದರ್ ಸಭೆಯ ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ, ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿ ಸಮಸ್ಯೆ ಸರಿಪಡಿಸುವಂತೆ ತಿಳಿಸಿದರು.

ಸಭೆಯಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಕೃಷ್ಣ, ಜಂಟಿ ನಿರ್ದೇಶಕ ರಾಮಚಾರಿ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮಲ್ಪೆ ಮೀನು ಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕೆ.ಗೋಪಾಲ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News