ಯುವತಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 10ವರ್ಷ ಜೈಲುಶಿಕ್ಷೆ

Update: 2019-01-17 15:57 GMT

ಕುಂದಾಪುರ, ಜ.17: ಎಂಟು ವರ್ಷಗಳ ಹಿಂದೆ ಯುವತಿಯನ್ನು ಮದುವೆ ಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣದ ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಅಂಪಾರು ಗ್ರಾಮದ ಮೂಡುಬಗೆ ನಿವಾಸಿ ವಿಘ್ನೇಶ್ವರ್(32) ಎಂದು ಗುರುತಿಸಲಾಗಿದೆ.

ಈತ 22 ವರ್ಷ ವಯಸ್ಸಿನ ಯುವತಿಯನ್ನು ಪ್ರೀತಿಸುವ ನಾಟಕವಾಡಿದ್ದು, 2011ರ ಜೂ.2 ರಂದು ಆಕೆಯನ್ನು ಮನೆ ತೋರಿಸುವ ನೆಪದಲ್ಲಿ ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದನು. ಬಳಿಕ 2011ರ ನ.15ರಂದು ಜೋಗ್ ಫಾಲ್ಸ್‌ಗೆ ಕರೆದೊಯ್ದು, ಸಾಗರದ ಲಾಡ್ಜ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಮೊದಲು ಮದುವೆಯಾಗುವ ಭರವಸೆ ನೀಡಿದ್ದ ವಿಘ್ನೇಶ್ವರ್ ಬಳಿಕ ತಪ್ಪಿಸಿಕೊಂಡಿದ್ದನು. ಈ ಹಿನ್ನೆಲೆ ಯಲ್ಲಿ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆತನನ್ನು ಬಂಧಿಸಿದ್ದರು.

ಕುಂದಾಪುರದ ಆಗಿನ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 20 ಸಾಕ್ಷಿಗಳ ಪೈಕಿ ಸಂತ್ರಸ್ತೆ ಸಹಿತ 12 ಮಂದಿಯ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ವಂಚನೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಜ.4ರಂದು ತೀರ್ಪು ನೀಡಿದ್ದರು. ಬಳಿಕ ಜ.8ರಂದು ನಡೆದ ವಿಚಾರಣೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಜ.17ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದರು.

ಅದರಂತೆ ಆರೋಪಿಗೆ ವಂಚನೆ(ಸೆಕ್ಷನ್ 417) ಪ್ರಕರಣಕ್ಕೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, ಅತ್ಯಾಚಾರ(ಸೆಕ್ಷನ್ 376) ಪ್ರಕರಣಕ್ಕೆ 10 ವರ್ಷ ಕಠಿನ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದರು. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬಿ. ಪ್ರಕಾ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News