​ಮಾಣಿಪಲ್ಲ ಗುಡ್ಡಕ್ಕೆ ಬೆಂಕಿ: ಹೊತ್ತಿ ಉರಿಯುತ್ತಿರುವ ಗಿಡಮರಗಳು

Update: 2019-01-17 16:16 GMT

ಮಂಗಳೂರು, ಜ.17: ಬಜ್ಪೆ ಸಮೀಪದ ಕುಪ್ಪೆಪದವು ಗ್ರಾಪಂ ವ್ಯಾಪ್ತಿಯ ಮಾಣಿಪಲ್ಲ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, 15 ಎಕರೆಗೂ ಹೆಚ್ಚು ಪ್ರದೇಶಕ್ಕೆ ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿಯುತ್ತಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.

‘ಗುಡ್ಡದಲ್ಲಿ ಸಂಜೆ ಸುಮಾರು 5 ಗಂಟೆ ನಂತರ ಗಾಢ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯಾಗಿ ಪರಿವರ್ತೆಗೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಗುಡ್ಡದಲ್ಲಿನ ಅಕೇಶಿಯಾ, ಮೆಂಜಾಮು ಗಿಡ ಮರ ಸೇರಿದಂತೆ ಅನೇಕ ಔಷಧೀಯ ಗಿಡಮೂಲಿಕೆಗಳು ಸುಟ್ಟು ಕರಕಲಾಗಿವೆ. ಜೊತೆಗೆ ಗುಡ್ಡದಲ್ಲಿದ್ದ ಹಾವು, ಮೊಲ, ಪಕ್ಷಿಗಳು ಸೇರಿದಂತೆ ಕಾಡುಪ್ರಾಣಿಗಳು ಬೆಂಕಿಗೆ ಬಲಿಯಾಗಿವೆ’ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸುಲೈಮಾನ್ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.

‘ಗುಡ್ಡಕ್ಕೆ ಹೊಂದಿಕೊಂಡಂತಿರುವ ರಸ್ತೆಯ ಪಕ್ಕದ ಬೆಂಕಿಯನ್ನು ಗ್ರಾಮಸ್ಥರು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗುಡ್ಡದ ಮೇಲೆ ಬೆಂಕಿ ತಾಂಡವವಾಡುತ್ತಿದ್ದು, ಅಗ್ನಿಶಾಮಕ ದಳದ ವಾಹನ ಬೆಂಕಿ ನಂದಿಸುವಲ್ಲಿ ಯತ್ನಿಸುತ್ತಿದೆ. ಸಮರೋಪಾದಿಯಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದರೂ ಬೆಂಕಿ ಹೊತ್ತಿಕೊಳ್ಳುವುದು ಹೆಚ್ಚುತ್ತಿದೆ. ಮಾಣಿಪಲ್ಲ ಗ್ರಾಮದಲ್ಲಿ 40-45 ಮನೆಗಳಿದ್ದು, ಪೆಟ್ರೋಲ್ ಬಂಕ್ ಕೂಡ ಸಮೀಪದಲ್ಲೇ ಇದೆ’ ಎನ್ನುತ್ತಾರೆ ಸುಲೈಮಾನ್.

ಬೆಂಕಿ ನಂದಿಸುವಲ್ಲಿ ಗ್ರಾಮದ 150ಕ್ಕೂ ಹೆಚ್ಚು ಮಂದಿಯ ಯುವಕ ತಂಡ ಬಕೇಟ್, ಕೊಡ, ಡ್ರಮ್ ಸೇರಿದಂತೆ ವಿವಿಧ ಪರಿಕರಗಳಲ್ಲಿ ನೀರನ್ನು ತಂದು ಎರಚುತ್ತಿದ್ದಾರೆ. ಸಂಜೆಯಿಂದ ಹೊತ್ತಿಕೊಂಡಿರುವ ಬೆಂಕಿ ಕಡಿಮೆಯಾಗುತ್ತಿಲ್ಲ. ಈ ವರೆಗೆ ಯಾವುದೇ ಜನಪ್ರತಿನಿಧಿಗಳ ಸ್ಥಳಕ್ಕೆ ಬಂದಿಲ್ಲ. ಸರಕಾರ ಕೈಕಟ್ಟಿ ಕುಳಿತರೆ ಊರೇ ಹೊತ್ತಿ ಉರಿಯುತ್ತದೆ ಎಂದು ಸುಲೈಮಾನ್ ಬೇಸರ ವ್ಯಕ್ತಪಡಿಸಿದರು.

ಮಾಣಿಪಲ್ಲ ಗುಡ್ಡಕ್ಕೆ ಹಲವು ವರ್ಷಗಳಿಂದ ಬೆಂಕಿ ಬೀಳುತ್ತಿದೆ. ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದು ತಿಳಿದುಬಂದಿಲ್ಲ. ಸಂಬಂಧಪಟ್ಟವರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಎಚ್ಚರದಿಂದ ಇರಲು ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.

- ಡಿ.ಪಿ.ಹಮ್ಮಬ್ಬ, ಕುಪ್ಪೆಪದವು ಗ್ರಾಪಂ ಉಪಾಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News