ರೈತ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2019-01-17 17:09 GMT

ಉಡುಪಿ, ಜ.17: ಮುಂದಿನ ಫೆ.3ರಂದು ಉಡುಪಿಯ ಶಾರದಾ ಮಂಟಪ ದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ ನಡೆಯಲಿರುವ ‘ರೈತ ಸಮಾವೇಶ-2019’ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಗರದ ಹೊಟೇಲ್ ಉಡುಪಿ ರೆಸಿಡೆನ್ಸಿಯಲ್ಲಿ ನಡೆಯಿತು.

ಮಂಗಳೂರಿನ ಉದ್ಯಮಿ ಗ್ರೆಗರಿ ಮಥಾಯಸ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸಮಾವೇಶಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಜಿಲ್ಲೆಯ ಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂಥ ಸಮಾವೇಶಗಳಿಂದ ಯುವ ಜನಾಂಗವನ್ನು ಮತ್ತೆ ಕೃಷಿಯತ್ತ ಸೆಳೆಯಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾತನಾಡಿ, ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ಮಾತ್ರ ಲಾಭದಾಯಕವಾಗಲು ಸಾಧ್ಯ. ಇದಕ್ಕೆ ತಜ್ಞರ ಸಲಹೆ-ಮಾರ್ಗದರ್ಶನ ಅಗತ್ಯ. ಅದು ಇಂಥ ಸಮಾವೇಶಗಳಲ್ಲಿ ಲಭ್ಯವಾಗುತ್ತದೆ ಎಂದರು.
ಇಂದು ರೈತ ಪರವಾಗಿ ಯಾವ ಸಂಘಟನೆಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೇವಲ ಮಾತಿನಿಂದ ರೈತರ ಉದ್ದಾರ ಸಾಧ್ಯವಿಲ್ಲ. ರೈತರ ಪರವಾದ ಚಿಂತನೆ ಅಗತ್ಯವಿದೆ ಎಂದು ಶರ್ಮ ನುಡಿದರು.ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗ ಉಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರೆ, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News