ಗೌರಿ ಲಂಕೇಶ್ ಪ್ರಕರಣ ಅವಲಂಬಿಸದೆ ದಾಭೋಲ್ಕರ್ ಮತ್ತು ಪನ್ಸಾರೆ ಹತ್ಯೆಗಳ ಸ್ವತಂತ್ರ ತನಿಖೆ ನಡೆಸಿ

Update: 2019-01-17 17:12 GMT

ಮುಂಬೈ,ಜ.17:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಹಿರಂಗಗೊಂಡಿರುವ ಮಾಹಿತಿಗಳನ್ನು ಸಂಪೂರ್ಣವಾಗಿ ನೆಚ್ಚಿಕೊಳ್ಳದಂತೆ ಮತ್ತು ವಿಚಾರವಾದಿ ನರೇಂದ್ರ ದಾಭೋಲ್ಕರ್ ಹಾಗೂ ಸಿಪಿಐ ನಾಯಕ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಸ್ವತಂತ್ರ ತನಿಖೆ ನಡೆಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ಸಿಬಿಐ ಮತ್ತು ಮಹಾರಾಷ್ಟ್ರ ಸಿಐಡಿ ಪೊಲೀಸರಿಗೆ ನಿರ್ದೇಶ ನೀಡಿದೆ.

ದಾಭೋಲ್ಕರ್ ಮತ್ತು ಪನ್ಸಾರೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುವಂತೆ ನ್ಯಾಯಮೂರ್ತಿಗಳಾದ ಎಸ್.ಸಿ.ಧರ್ಮಾಧಿಕಾರಿ ಮತ್ತು ಎಂ.ಎಸ್.ಕಾರ್ಣಿಕ್ ಅವರ ಪೀಠವು ಉಭಯ ತನಿಖಾ ಸಂಸ್ಥೆಗಳಿಗೆ ಸೂಚಿಸಿತು.

ರಾಜ್ಯ ಸಿಐಡಿ ಪೊಲೀಸ್‌ನ ವಿಶೇಷ ತನಿಖಾ ತಂಡ(ಸಿಟ್)ವು ತನಿಖೆಯಲ್ಲಿನ ಪ್ರಗತಿ ಕುರಿತು ತನ್ನ ವರದಿಯನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಈ ನಿರ್ದೇಶಗಳನ್ನು ನೀಡಿತು.

ದಾಭೋಲ್ಕರ್ ಮತ್ತು ಪನ್ಸಾರೆ ಹತ್ಯೆಗಳ ಕುರಿತು ಮಾಹಿತಿಗಳನ್ನು ಪಡೆಯಲು ಗೌರಿ ಲಂಕೇಶ್ ಪ್ರಕರಣದ ಆರೋಪಿಗಳನ್ನು ಪ್ರಶ್ನಿಸುತ್ತಿರುವುದಾಗಿ ಸಿಬಿಐ ಮತ್ತು ರಾಜ್ಯ ಸಿಐಡಿ ಹೇಳಿಕೆಗಳನ್ನು ಬೆಟ್ಟುಮಾಡಿದ ಪೀಠವು,ನೀವು ಕರ್ನಾಟಕದಲ್ಲಿಯ ಬೇರೊಂದು ಪ್ರಕರಣದ ಆರೋಪಿಗಳನ್ನು ಪ್ರಶ್ನಿಸುತ್ತಿದ್ದೀರಿ. ಆದರೆ ಸಿಟ್‌ನ ವರದಿಯು ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ನೀವು ಕೈಗೊಳ್ಳುತ್ತಿರುವ ನಿಜವಾದ ಕ್ರಮವೇನು ಎನ್ನುವುದನ್ನು ತಿಳಿಸಿಲ್ಲ. ಬೇರೊಂದು ಪ್ರಕರಣದಲ್ಲಿ ಆರೋಪಿಯು ಬಹಿರಂಗಗೊಳಿಸಿರುವ ಮಾಹಿತಿಗಳನ್ನು ನೀವು ಸಂಪೂರ್ಣವಾಗಿ ನೆಚ್ಚಿಕೊಳ್ಳುವಂತಿಲ್ಲ. ಇದು ಎಷ್ಟು ಸಮಯ ಮುಂದುವರಿಯುತ್ತದೆ? ನೀವು ಸ್ವತಂತ್ರ ತನಿಖೆಯನ್ನು ನಡೆಸಬೇಕು. ಈ ಹತ್ಯೆಗಳು ಮಹಾರಾಷ್ಟ್ರದಲ್ಲಿ ,ಅದೂ ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆಗೆ ಮುನ್ನ ನಡೆದಿರುವುದರಿಂದ ಸ್ವತಂತ್ರವಾಗಿ ಸ್ವಲ್ಪವಾದರೂ ಮಾಹಿತಿಗಳನ್ನು ಸಂಗ್ರಹಿಸಿ ಎಂದು ಹೇಳಿತು.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತನ್ನ ಅಧಿಕಾರಿಗಳು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು.

ಕರ್ನಾಟಕದಲ್ಲಿ ತನಿಖೆಯಲ್ಲಿ ಉತ್ತಮ ಪ್ರಗತಿಯಾಗಿದೆ,ಆದರೆ ಇಲ್ಲಿಯ ತನಿಖಾ ಏಜೆನ್ಸಿಗಳು ಹಾಗೆ ಮಾಡುವಲ್ಲಿ ವಿಫಲಗೊಂಡಿವೆ. ದುರದೃಷ್ಟವೆಂದರೆ ಕರ್ನಾಟಕದಲ್ಲಿ ತನಿಖಾ ವ್ಯವಸ್ಥೆಗೆ ಸಂಪೂರ್ಣ ಸಹಕಾರ ದೊರೆಯುತ್ತಿದೆ,ಆದರೆ ಮಹಾರಾಷ್ಟ್ರದಲ್ಲಿ ಈ ವ್ಯವಸ್ಥೆಯು ಕೆಲಸ ಮಾಡುತ್ತಿಲ್ಲ ಅಥವಾ ಅದಕ್ಕೆ ಸಹಕಾರ ದೊರೆಯುತ್ತಿಲ್ಲ ಎಂದು ಪೀಠವು ಹೇಳಿತು.

ಪನ್ಸಾರೆ ಮತ್ತು ದಾಭೋಲ್ಕರ್ ಪ್ರಕರಣಗಳಲ್ಲಿ ಕೆಲವರನ್ನು ಬಂಧಿಸಲಾಗಿದೆ ಮತ್ತು ದಾಭೋಲ್ಕರ್ ಪ್ರಕರಣದಲ್ಲಿ ಶೀಘ್ರವೇ ಆರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ ಸಿಂಗ್ ತಿಳಿಸಿದರು.

ತಮ್ಮ ಮುಂದಿನ ತನಿಖಾ ಪ್ರಗತಿ ವರದಿಗಳನ್ನು ಫೆ.6ರೊಳಗೆ ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐ ಮತ್ತು ಸಿಐಡಿಗೆ ಸೂಚಿಸಿತು.

ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News