ರಾಜಸ್ಥಾನ: ಸಂತಾನ ಹರಣ ಶಸ್ತ್ರಚಿಕಿತ್ಸೆ; ಹೊಟ್ಟೆಯಲ್ಲಿ ಬ್ಲೇಡ್ ತುಂಡು ಉಳಿಸಿದ ವೈದ್ಯರು !

Update: 2019-01-17 18:37 GMT
ಸಾಂದರ್ಭಿಕ ಚಿತ್ರ

ಭರತ್‌ಪುರ, ಜ. 17: ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಅಲ್ಲಿನ ವೈದ್ಯರೊಬ್ಬರಿಂದ  ಮಹಿಳೆಯೋರ್ವರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿದ ಸಂದರ್ಭದಲ್ಲಿ ಬ್ಲೇಡ್ ತುಂಡಾಗಿದ್ದು, ಅದು ಹೊಟ್ಟೆಯಲ್ಲೇ ಉಳಿದುಕೊಂಡಿದೆ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

ಶಸ್ತ್ರಚಿಕಿತ್ಸೆಯ ವಿಫಲತೆ ಹಿನ್ನೆಲೆಯಲ್ಲಿ ಕುಮ್ಹೇರ್ ಉಪ ವಿಭಾಗದ ಅಧಿಯಾ ಕಾ ನಾಗ್ಲಾ ಗ್ರಾಮದ ಮೀನಾ ದೇವಿ ಅವರನ್ನು ಭರತ್‌ಪುರ ಪಟ್ಟಣದ ರಾಜ್‌ಬಹುದ್ದೂರ್ ಮೆಮೋರಿಯಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿನ ವೈದ್ಯರು ಬ್ಲೇಡ್ ತೆಗೆಯಲು ವಿಫಲರಾದ ಬಳಿಕ ಅವರನ್ನು ಜೈಪುರದಲ್ಲಿರುವ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಕುಮ್ಹೇರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದೇವಿ ಅವರನ್ನು ಬುಧವಾರ ಬೆಳಗ್ಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಗಿತ್ತು ಎಂದು ದೇವಿ ಅವರ ಕುಟುಂಬ ತಿಳಿಸಿದೆ. ನನ್ನ ಸೊಸೆ ದೇವಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾನೆ. ಆದುದರಿಂದ ಅವರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರು. ಅಂಗನವಾಡಿ ಆರೋಗ್ಯ ಕಾರ್ಯಕರ್ತೆ ಮಂಜು ದೇವಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಅನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೇವಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು ಎಂದು ದೇವಿ ಮಾವ ವಿಜೇಂದ್ರ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News