ಹೆಣ್ಣು ಮಕ್ಕಳ ವೈಯಕ್ತಿಕ ಮಾಹಿತಿ ನೀಡದಂತೆ ಸೂಚನೆ

Update: 2019-01-17 18:11 GMT

ಮಂಗಳೂರು, ಜ.17: ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮದಡಿ 2 ಲಕ್ಷ ರೂ. ನಗದು ಉತ್ತೇಜನ ನೀಡುವುದಾಗಿ ಕೆಲವು ಅನಧಿಕೃತ ಸಂಘಟನೆಗಳು/ಸ್ವಯಂ ಸೇವಾ ಸಂಸ್ಥೆಗಳು/ವ್ಯಕ್ತಿಗಳು ಹೆಣ್ಣು ಮಕ್ಕಳ ವೈಯಕ್ತಿಕ ಮಾಹಿತಿಯನ್ನು ನಮೂನೆಯಲ್ಲಿ ಪಡೆದು ವಂಚಿಸುತ್ತಿರುವುದು ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಮನಕ್ಕೆ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದ.ಕ.ಜಿಲ್ಲಾ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ ಯಾರಿಗೂ ನಗದು ವಿತರಣೆ ಮಾಡುವ ಕಾರ್ಯಕ್ರಮವಿಲ್ಲ. ಅನಧಿಕೃತ ಸಂಸ್ಥೆಗಳು/ವ್ಯಕ್ತಿಗಳು ಈ ಯೋಜನೆಯಡಿ ಹಣವನ್ನು ನೀಡುವುದಾಗಿ ಭರವಸೆ ನೀಡಿ ಸಾರ್ವಜನಿಕರನ್ನು ಮೋಸ ಮಾಡುತ್ತಿದ್ದಾರೆ. ಈ ರೀತಿ ವಂಚನೆ ಮಾಡುವ ಅಥವಾ ಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಈಗಾಗಲೆ ಕೆಲವರ ವಿರುದ್ಧ ವಿವಿಧೆಡೆ ಎಫ್‌ಐಆರ್ ದಾಖಲಿಸಲಾಗಿದೆ.

ಇಂತಹ ವಂಚಕರ ಬಲೆಗೆ ಬೀಳದಂತೆ ಸಾರ್ವಜನಿಕರಿಗೆ ಸಲಹೆ/ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ವಂಚಕರು ಕೋರುವ ಯಾವುದೇ ವೈಯಕ್ತಿಕ ವಿವರಗಳನ್ನು ಅಂದರೆ ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು, ದೂರವಾಣಿ/ಮೊಬೈಲ್ ಸಂಖ್ಯೆ/ಇ-ಮೇಲ್ ಐಡಿ/ಇತರೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಬಾರದು. ಇಂತಹ ವಂಚನೆಗಳನ್ನು ಮಾಡುವವರ ಬಗ್ಗೆ ವ್ಯಕ್ತಿಗಳ/ಸಂಸ್ಥೆಗಳ ಹೆಸರನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಉಪನಿರ್ದೇಶಕರು ಸೂಚನೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News