ಪೌರತ್ವ ಮಸೂದೆ:ಬಂದ್‌ನಿಂದಾಗಿ ಅಸ್ಸಾಮಿನ ಹಲವಾರು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ

Update: 2019-01-18 16:07 GMT

ಗುವಾಹಟಿ,ಜ.18: ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಬುಡಕಟ್ಟು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತ್ಯೇಕವಾಗಿ ಕರೆ ನೀಡಿದ್ದ ಎರಡು ಬಂದ್‌ಗಳಿಂದಾಗಿ ಲೋವರ್ ಅಸ್ಸಾಮಿನ ಹಲವಾರು ಜಿಲ್ಲೆಗಳು ಮತ್ತು ಅಪ್ಪರ್ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಗಳಲ್ಲಿ ಶುಕ್ರವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಆದರೆ ಬಂದ್ ಪೀಡಿತ ಪ್ರದೇಶಗಳಿಂದ ಯಾವುದೇ ಹಿಂಸಾಚಾರದ ಘಟನೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದರು.

ಮಾರುಕಟ್ಟೆಗಳು,ಅಂಗಡಿಗಳು,ಶಿಕ್ಷಣ ಸಂಸ್ಥೆಗಳು,ಬ್ಯಾಂಕುಗಳು ಮತ್ತು ಖಾಸಗಿ ಕಚೇರಿಗಳು ಮುಚ್ಚಿದ್ದರೆ ಸರಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು. ಖಾಸಗಿ ಹಾಗು ಸಾರ್ವಜನಿಕ ಸಾರಿಗೆಯ ವಾಹನಗಳು ರಸ್ತೆಗಿಳಿದಿರಲಿಲ್ಲ. ಹೆದ್ದಾರಿಗಳಲ್ಲಿ ವಾಹನಗಳ ಸಂಚಾರವಿರಲಿಲ್ಲ.

ಪೌರತ್ವ ಮಸೂದೆಯನ್ನು ಮತ್ತು ಸಂವಿಧಾನ(ಪರಿಶಿಷ್ಟ ಪಂಗಡಗಳು) ಆದೇಶ ತಿದ್ದುಪಡಿ ಮಸೂದೆ,2019ರ ಅನುಷ್ಠಾನವನ್ನು ಕೈಬಿಡಬೇಕೆಂದು ಆಗ್ರಹಿಸಿ ಆದಿವಾಸಿ ಕನ್ವೆನ್ಷನ್ ಕಮಿಟಿಯು ಲೋವರ್ ಅಸ್ಸಾಮಿನಲ್ಲಿ ಬಂದ್‌ಗೆ ಕರೆ ನೀಡಿದ್ದರೆ,ಜ.8ರಂದು ಪೌರತ್ವ ಮಸೂದೆಯ ವಿರುದ್ಧ ನಡೆದಿದ್ದ ಅಸ್ಸಾಂ ಬಂದ್ ಸಂದರ್ಭದಲ್ಲಿ ಗೋಲಘಾಟ್‌ನಲ್ಲಿಯ ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಿದ್ದ ಆರೋಪದಲ್ಲಿ ಬಂಧಿಸಲಾಗಿರುವ ನಾಲ್ವರು ವಿದ್ಯಾರ್ಥಿ ನಾಯಕರ ಬಿಡುಗಡೆಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಗೋಲಘಾಟ್ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News