ಮಂಗಳೂರು: ಪ್ರೇಕ್ಷಕರನ್ನು ರಂಜಿಸಿದ ‘ಸುಹಾನಿ ಶಾಮ್’ ಸಂಗೀತ

Update: 2019-01-18 16:28 GMT

ಮಂಗಳೂರು, ಜ.16: ಖ್ಯಾತ ಸಂಗೀತಕಾರ ಮುಹಮ್ಮದ್ ರಫಿ ಖ್ಯಾತಿಯ ಮಂಗಳೂರಿನ ಮುಹಮ್ಮದ್ ಹನೀಫ್ (ಉಪ್ಪಳ) ನಗರದ ಪುರಭವನದಲ್ಲಿ ನಡೆದ ‘ರಫಿ-ಹನೀಫ್’ ಬ್ಯಾನರ್‌ನಡಿ ‘ಸುಹಾನಿ ಶಾಮ್’ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರಿಗೆ ರಸದೌತಣವನ್ನು ನೀಡಿತು.

ಕಳೆದ 35 ವರ್ಷದಿಂದ ಹಾಡು-ಸಂಗೀತದಲ್ಲಿ ತೊಡಗಿಸಿಕೊಂಡಿರುವ ಮುಹಮ್ಮದ್ ಹನೀಫ್ ಈ ಸಂಗೀತ ರಸಮಂಜರಿ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ಕಿಡ್ನಿ, ಕ್ಯಾನ್ಸರ್ ಮತ್ತಿತರ ರೋಗದಿಂದ ಬಳಲುವವರಿಗೆ ನೆರವು ನೀಡಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮ ವೀಕ್ಷಣೆ ಮತ್ತು ಸಂಗೀತ ಆಸ್ವಾದಿಸಲು ನಿರ್ದಿಷ್ಟ ಪ್ರವೇಶ ಧನವಿಲ್ಲ. ಆದರೆ ಅಶಕ್ತ ರೋಗಿಗಳಿಗೆ ನೆರವು ನೀಡಲು ಬಯಸುವ ಪ್ರೇಕ್ಷಕರು ಸಹಾಯಧನ ನೀಡಲು ಬಯಸಿದರೆ ಅದನ್ನು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಿದ್ದರು.

‘ಸುಹಾನಿ ಶಾಮ್’ ಸಂಗೀತ ಕಾರ್ಯಕ್ರಮದುದ್ದಕ್ಕೂ ರಫಿಯ ಶೈಲಿಯಲ್ಲಿ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಳಿಸಿದರು.

ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ, ಖ್ಯಾತ ಗಾಯಕ ಮುಹಮ್ಮದ್ ಹನೀಫ್ ಅವರು ಕೇವಲ ಸಂಗೀತವೊಂದೇ ಅಲ್ಲದೆ, ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ಮೈಗೂಡಿಸಿಕೊಂಡಿದ್ದಾರೆ. ಸಂಗೀತದ ಮೂಲಕವೂ ಸೇವೆ ನೀಡಬಹುದು ಎನ್ನುವುದು ಮುಹಮ್ಮದ್ ಹನೀಫ್ ಹಮ್ಮಿಕೊಂಡಿರುವ ‘ಸುಹಾನಿ ಶಾಮ್’ ಸಂಗೀತ ಕಾರ್ಯಕ್ರಮ ಅದನ್ನು ಸ್ಪಷ್ಟಪಡಿಸುತ್ತದೆ. ಜಾತಿ, ಧರ್ಮ, ವರ್ಗಗಳನ್ನು ಮೀರಿ ಬೆಳೆಯುವುದಿದ್ದರೆ ಅದು ಸಂಗೀತದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಖ್ಯಾತ ಸಂಗೀತಕಾರ ಮುಹಮ್ಮದ್ ಹನೀಫ್ ಸಭೆಯನ್ನುದ್ದೇಶಿಸಿ ಮಾತನಾಡಿ, ‘ನನ್ನ ಈ ಹವ್ಯಾಸಕ್ಕೆ ಮುಹಮ್ಮದ್ ರಫಿಯೇ ಸ್ಫೂರ್ತಿ. ಹಾಡಿನೊಂದಿಗೆ ಅಶಕ್ತರಿಗೆ ಏನಾದರೊಂದು ನೆರವು ನೀಡಬೇಕು ಎಂದು ಅದೆಷ್ಟೋ ವರ್ಷದಿಂದ ಆಶಿಸುತ್ತಿದ್ದೆ. ಕೆಲವು ಕಾರಣದಿಂದ ಸಾಧ್ಯವಾಗಲಿಲ್ಲ. ಇದೀಗ ಸಹೃದಯಿಗಳ ಸಹಕಾರದಿಂದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದೇನೆ. ಅಲ್ಲಿ ಸಂಗ್ರಹವಾದ ಹಣವನ್ನು ಸಂಪೂರ್ಣವಾಗಿ ಅಶಕ್ತ ರೋಗಿಗಳಿಗೆ ನೀಡಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.

ಸಿನೆಮಾ ನಿರ್ದೇಶಕ ರಿಚಾರ್ಡ್ ಕ್ಯಾಸ್ಟೆಲಿನೋ ಮಾತನಾಡಿ, ಮಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯುವುದು ಅಪರೂಪವಾಗಿದೆ. ಮುಹಮ್ಮದ್ ಹನೀಫ್ ಅವರ ಕಾರ್ಯಕ್ರಮ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾರ್ವಾ ಬಿಲ್ಡರ್ಸ್‌ ಮತ್ತು ಡೆವಲಪರ್ಸ್‌ನ ಅಬ್ದುಲ್ ರಶೀದ್, ಗಲ್ಫ್ ಪ್ರೈಮ್ ಏರ್ ಡಕ್ಟಿಂಗ್‌ನ ಮ್ಯಾನೇಜಿಂಗ್ ಪಾರ್ಟ್ನರ್‌ ಅಬ್ದುಲ್ಲಾ ಮೋನು, ಕೆಎಸ್ಸಾರ್ಟಿಸಿ ಮಾಜಿ ನಿರ್ದೇಶಕ ಅಬ್ದುಲ್ ಮಜೀದ್ ಸೂರಲ್ಪಾಡಿ, ಪ್ರೈಡ್ ಡೆವಲಪರ್ಸ್‌ನ ಮಹ್ಮೂದ್ ಕುಕ್ಕರ್, ಸಂತ ಆ್ಯನ್ಸ್‌ನ ಟೀಚರ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲೆ ಮರಿಯಾ ಶುಭಾ ಎ.ಸಿ., ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ಉಪಮೇಯರ್ ಮುಹಮ್ಮದ್ ಕೆ. ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News