‘ಮಲಬಾರ್ ಗೋಲ್ಡ್’ ಬಗ್ಗೆ ಅವಹೇಳನಕಾರಿ ಸಂದೇಶ ರವಾನೆ: ಆರೋಪಿ ಸೆರೆ

Update: 2019-01-18 16:28 GMT
ಭುಜೇಶ್ ಪೂಜಾರಿ

ಮಂಗಳೂರು, ಜ.18: ದೇಶದ ಪ್ರತಿಷ್ಠಿತ ‘ಮಲಬಾರ್ ಗೋಲ್ಡ್’ ಸಂಸ್ಥೆಯ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕೇರಳದ ಮಂಜೇಶ್ವರ ಕುಂಟಗಲಡ್ಕದಲ್ಲಿ ಮಂಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಸರಗೋಡು ಮಂಗಲ್ಪಾಡಿ ನಿವಾಸಿ ಭುಜೇಶ್ ಪೂಜಾರಿ (37) ಬಂಧಿತ ಆರೋಪಿ. ಆತನಿಂದ ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್ ಹ್ಯಾಂಡ್‌ಸೆಟ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸಂದೇಶವನ್ನು ಈತನಿಗೆ ಫಾರ್ವರ್ಡ್ ಮಾಡಿದವರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

ಸಾಮಾಜಿಕ ಜಾಲತಾಣವಾದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಕೆಲವರು ಮಲಬಾರ್ ಗೋಲ್ಡ್ ಸಂಸ್ಥೆಯ ಬಗ್ಗೆ ಅವಹೇಳನಕಾರಿ ಸುಳ್ಳು ವದಂತಿ ಹರಿದಾಡಿಸಿ, ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸಿ ಮಲಬಾರ್ ಗೋಲ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ, ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಭೀತಿಯನ್ನುಂಟು ಮಾಡಿದ್ದಾರೆ ಎಂದು ಮಲಬಾರ್ ಗೋಲ್ಡ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ ಒಕ್ಕಲಿಗ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರೀಫ್, ಪಿಎಸ್ಸೈಗಳಾದ ರಾಜೇಂದ್ರ ಬಿ., ಮಂಜುಳಾ ಎಲ್. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News