ಮಂಗನ ಕಾಯಿಲೆ: ಶಾಲಾ ಮಕ್ಕಳ ಮೂಲಕ ಜಾಗೃತಿಗೆ ಕ್ರಮ

Update: 2019-01-18 16:37 GMT

ಉಡುಪಿ, ಜ.18: ಶಾಲಾ ಮಕ್ಕಳಿಗೆ ಮಂಗನ ಕಾಯಿಲೆ ಕುರಿತಂತೆ ಸಮಗ್ರ ಮಾಹಿತಿ, ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕುರಿತು ತಿಳುವಳಿಕೆ ನೀಡಿ ಅವರ ಮೂಲಕ ಅವರ ಹೆತ್ತವರಲ್ಲೂ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇಂದು ಕುಂದಾಪುರ ತಾಲೂಕಿನಲ್ಲಿ ಚಾಲನೆ ನೀಡಲಾಯಿತು.

ಕುಂದಾಪುರ ತಾಲೂಕು ಸಿದ್ಧಾಪುರದ ಸಿದ್ಧಾಪುರ ಹೈಸ್ಕೂಲ್‌ನಲ್ಲಿ ಇಂದು ಈ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಚಾಲನೆ ನೀಡಿದರು. ಕುಂದಾಪುರ ತಾಲೂಕಿನಲ್ಲಿರುವ 200ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರನ್ನು ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅವರು ಗ್ರಾಮದ ಶಾಲೆಗಳಿಗೆ ತೆರಳಿ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮಂಗನ ಕಾಯಿಲೆ ಕುರಿತು ಜಾಗೃತಿಯನ್ನು ಮೂಡಿಸಲಿದ್ದಾರೆ.

ಕುಂದಾಪುರ ತಾಲೂಕಿನ ಮುಧೂರು, ಅಮಾಸೆಬೈಲು ಸೇರಿದಂತೆ ವಿವಿದೆಡೆಗಳಲ್ಲಿ ಇರುವ ಕೊರಗ ಕಾಲನಿಗಳಿಗೆ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಭೇಟಿ ನೀಡಲಿದ್ದು, ಅವರಿಗೆ ಮಂಗನ ಕಾಯಿಲೆ ಕುರಿತಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತಿಳುವಳಿಕೆ ನೀಡಲಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.

ಕೊರಗರು ಹೆಚ್ಚಾಗಿ ಕಾಡು ಪ್ರದೇಶಗಳಲ್ಲಿಯೇ ವಾಸವಾಗಿದ್ದು, ತಮ್ಮ ಬದುಕಿಗಾಗಿ ಕಾಡಿನ ಉತ್ಪನ್ನಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಅವರು ಕಾಡಿಗೆ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಅವರಿಗೆ ಈ ಕುರಿತು ಮಾಹಿತಿಯನ್ನು ನೀಡಲಿದ್ದೇವೆ ಎಂದು ಅವರು ಹೇಳಿದರು.

ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಇಂದು ಒಂದು ಸತ್ತ ಮಂಗನ ಶವ ಪತ್ತೆಯಾಗಿದೆ. ಮಂಗನ ಕಾಯಿಲೆ ಕುರಿತು ವಿಶೇಷ ಗ್ರಾಮಸಭೆಗಳನ್ನು ಸಹ ನಡೆಸಲಾಗುತ್ತಿದೆ ಎಂದು ಡಾ.ನಾಗಭೂಷಣ ಉಡುಪ ವಿವರಿಸಿದರು.

ಕಾರ್ಕಳ ತಾಲೂಕಿನಾದ್ಯಂತ ಇಂದು ಮಂಗನಕಾಯಿಲೆ ಕುರಿತಂತೆ ವಿಶೇಷ ಗ್ರಾಮ ಸಭೆಗಳನ್ನು ನಡೆಸಲಾಗಿದೆ. ಅಲ್ಲದೇ ಉಡುಪಿ ತಾಲೂಕಿನ ಕೆಲವು ಕಡೆಗಳನ್ನು ಇದನ್ನು ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಿಂದಲೂ ಮನುಷ್ಯನಲ್ಲಿ ಶಂಕಿತ ಮಂಗನ ಕಾಯಿಲೆಯ ಲಕ್ಷಣ ಕಂಡುಬಂದಿರುವ ಬಗ್ಗೆ ವರದಿ ಬಂದಿಲ್ಲ ಎಂದವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News