ಎಲ್ಲಾ ಕಲೆಗಳನ್ನೂ ಪ್ರೋತ್ಸಾಹಿಸಿ: ದಿನಕರ ಬಾಬು

Update: 2019-01-18 16:42 GMT

ಉಡುಪಿ, ಜ.18: ಚಿತ್ರಕಲೆ ಸೇರಿದಂತೆ ಇತರ ಎಲ್ಲಾ ಕಲೆಗಳಿಗೂ ಪ್ರೋತ್ಸಾಹ ನೀಡುವಂತೆ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕ ಬಾಬು ಕರೆ ನೀಡಿದ್ದಾರೆ.

ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ನಳಂದಾ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಅಂಬಲಪಾಡಿ ರೋಟರಿ ಕ್ಲಬ್ ಅಂಬಲಪಾಡಿ, ಲಯನ್ಸ್ ಕ್ಲಬ್ ಉಡುಪಿ, ಚೇತನ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕೋಟೇಶ್ವರ ಹಾಗೂ ಕಿದಿಯೂರು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಾಗಿದ್ದ ದಿ.ಬೋಜು ಹಾಂಡ ಮತ್ತು ದಿ.ಹಯವದನ ರಾವ್ ಸ್ಮರಣಾರ್ಥ ನಡೆದ ಉಡುಪಿ ಜಿಲ್ಲೆಯಲ್ಲಿ ಸಾಧನೆಗೈದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕಲಾ ಕಣ್ಮಣಿ ಚಿತ್ರಕಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಗಾರ, ನೃತ್ಯ-ಗಾನ-ಕುಂಚ ಹಾಗೂ ಮಕ್ಕಳ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಾಲೆಗಳಲ್ಲಿ ಚಿತ್ರಕಲೆ ಮತ್ತು ಇನ್ನಿತರ ಕಲೆಗಳಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದಲ್ಲಿ ಅಂತಹ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯತ್‌ನಿಂದ ಸಹಕಾರ ನೀಡುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕಿದಿಯೂರಿನ ಎಸ್‌ವಿಎಸ್‌ಟಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಮರಿನಾ ಸರೋಜ ಮಾತನಾಡಿ, ಚಿತ್ರಕಲಾ ತರಗತಿ ಎಂದರೆ ನಿರ್ಲಕ್ಷ ತೋರುತಿದ್ದ ದಿನಗಳಿದ್ದವು. ಆದರೆ ಇಂದು ಚಿತ್ರಕಲೆ ಎನ್ನುವುದು ಬಳ ಪ್ರಮುಖ ಕಲೆಯಾಗಿದೆ ಎಂದರು.

ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾದ್ಯಾಯಿನಿ ನಿರ್ಮಲಾ ರಾವ್, ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಚಿತ್ರಕಲಾ ಶಿಕ್ಷಕ ದಿನಮಣಿ ಶಾಸ್ತ್ರಿ ಅವರು ಮಾತನಾಡಿದರು.

ಆಲೂರು ಸರಕಾರಿ ಪ್ರೌಢಶಾಲೆ ಹಾಗೂ ಒಳಕಾಡು ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ, ಗಾನ, ಕುಂಚ, ಚಿತ್ರ ಕಲಾ ಪ್ರದರ್ಶನ ನಡೆಯಿತು. ಉಡುಪಿ ಜಿಲ್ಲೆಯ ಸಾಧನೆ ಮಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಚಿತ್ರಕಲಾ ಶಿಕ್ಷಕರು, ನಿವೃತ್ತ ಚಿತ್ರಕಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಉಡುಪಿ ಡಯಟ್‌ನ ಉಪನಿರ್ದೇಶಕಿ ಸಿ.ಬಿ ಬಾಗ್ಯಲಕ್ಷ್ಮಿ, ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಗೌರವಅಧ್ಯಕ್ಷ ವಳಕಾಡು ರಾಧಾಕೃಷ್ಣ ಉಪಾಧ್ಯಾಯ, ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಕಳ ವಲಯದ ಕಾರ್ಯದರ್ಶಿ ವೀರೇಶ್ ಪಾತಾಳಿ ಉಪಸ್ಥಿತರಿದ್ದರು.

ಚಿತ್ರಕಲಾ ಶಿಕ್ಷಕ ಪ್ರಶಾಂತ್ ಬಿ.ಪಿ ಸ್ವಾಗತಿಸಿದರು. ಸದಾನಂದ ಪಂಚನಬೆಟ್ಟು ಕಾರ್ಯಕ್ರಮ ನಿರೂಪಿಸಿ, ಶಿವಾನಂದ ಸ್ವಾಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News