ಭಾರತ ಗಡಿಯಿಂದ 50 ಕಿ.ಮೀ.ನಲ್ಲಿ ಚೀನಾದಿಂದ ಭೂಗತ ಸೌಲಭ್ಯ ನಿರ್ಮಾಣ: ಉಪಗ್ರಹ ಚಿತ್ರದಿಂದ ಬಹಿರಂಗ

Update: 2019-01-18 16:51 GMT

 ಹೊಸದಿಲ್ಲಿ, ಜ. 18: ಭಾರತ-ಚೀನಾ ಗಡಿಯಿಂದ 50 ಕಿ.ಮೀ. ದೂರದಲ್ಲಿ ಹಾಗೂ ಲಡಾಖ್‌ನ ಡೆಮ್‌ಚೋಕ್‌ನಲ್ಲಿರುವ ಭಾರತೀಯ ಠಾಣೆಯಿಂದ 60 ಕಿ.ಮೀ. ದೂರದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಭೂಗತ ಸೌಲಭ್ಯ (ಯುಜಿಎಫ್)ವನ್ನು ನಿರ್ಮಿಸುತ್ತಿರುವುದನ್ನು ಉಪಗ್ರಹ ಚಿತ್ರ ಬಹಿರಂಗಗೊಳಿಸಿದೆ. ಇದುವರೆಗೆ ಟಿಬೆಟ್‌ನಲ್ಲಿ ಕೇವಲ ಒಂದು ಯುಜಿಎಫ್ ಇತ್ತು. ಕ್ಸಿನ್‌ಜಿಯಾಂಗ್ ಉಯ್ಘರ್ ವಲಯದಿಂದ ಭಾರತವನ್ನು ಗುರಿಯಾಗಿರಿಸಿ ಸುಲಭವಾಗಿ ದಾಳಿ ನಡೆಸುವ ಉದ್ದೇಶದಿಂದ ಚೀನಾ ಈ ಇನ್ನೊಂದು ಯುಜಿಎಫ್ ನಿರ್ಮಿಸಿರುವ ಸಾಧ್ಯತೆ ಇದೆ. ಗಾರಿ ಪಟ್ಟಣದ ಸಮೀಪ ನಿರ್ಮಾಣ ಹಂತದಲ್ಲಿರುವ ಈ ಯುಜಿಎಫ್ ಅನ್ನು ಉಪಗ್ರಹ ಗುರುತಿಸಿದೆ.

ಪೂರ್ವದಲ್ಲಿ ಭಾರತ-ಚೀನಾ-ಭೂತಾನ್ ಮೂರು ದೇಶಗಳ ಗಡಿ ಸೇರುವ ಸಮೀಪದಲ್ಲಿ ಸಂಭವಿಸಿದ ಡೋಕಾಲಾ ಬಿಕ್ಕಟ್ಟಿನ ಸುಮಾರು 6 ತಿಂಗಳ ಬಳಿಕ 2016 ಡಿಸೆಂಬರ್‌ನಲ್ಲಿ ಈ ಯುಜಿಎಫ್ ನಿರ್ಮಾಣ ಆರಂಭಿಸಲಾಗಿದೆ. ಈ ಯುಜಿಎಫ್ ಅನ್ನು ತ್ವರಿತವಾಗಿ ನಿರ್ಮಿಸಿರುವುದನ್ನು ಗಮನಿಸಿದರೆ ಸ್ಥಳೀಯರ ಬದಲಿಗೆ ವಿಶೇಷ ಸಿಬ್ಬಂದಿಯನ್ನು ಬಳಸಿರುವುದನ್ನು ಸೂಚಿಸುತ್ತದೆ. ಅಲ್ಲದೆ, ಸೌಲಭ್ಯದ ಭದ್ರತೆ ಹಾಗೂ ಗೌಪ್ಯತೆ ಕಾಪಾಡಲು ಇವರನ್ನು ಬಳಸಿರುವುದು ಕಂಡುಬರುತ್ತದೆ. ಯುಜಿಎಫ್‌ನಲ್ಲಿ ನಾಲ್ಕು ದೊಡ್ಡ ಸುರಂಗ ಹಾಗೂ ಮೂರು ಸಣ್ಣ ಸುರಂಗ ಪ್ರವೇಶಗಳಿವೆ. ಪ್ರವೇಶದಲ್ಲಿರುವ ಹೆಚ್ಚಿನ ಬ್ಯಾರಕ್‌ಗಳು ಭದ್ರತಾ ಸಿಬ್ಬಂದಿಗಾಗಿ ನಿರ್ಮಿಸಲಾಗಿದೆ. ಈ ಸೌಲಭ್ಯಗಳು ಎರಡು ಪ್ರತ್ಯೇಕ ಗುಂಪುಗಳಲ್ಲಿ ಇವೆ. ಇದು ಪರಸ್ಪರ ತುಂಬಾ ದೂರವಿಲ್ಲ ಹಾಗೂ ಸೂಕ್ತ ರಸ್ತೆ ಇದನ್ನು ಸಂಪರ್ಕಿಸುತ್ತದೆ. ಬಲವರ್ಧಿತ ಸಿಮೆಂಟ್ ಕಾಂಕ್ರಿಟ್‌ನಿಂದ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News