ಮಂಗಳೂರು: ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ 10 ಲಕ್ಷ ರೂ. ಮೌಲ್ಯದ ಚಿನ್ನ ವಶ

Update: 2019-01-18 16:52 GMT

ಮಂಗಳೂರು, ಜ.18: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರಿಂದ 10.16 ಲಕ್ಷ ರೂ. ಮೌಲ್ಯದ 314 ಗ್ರಾಂ ಚಿನ್ನದ ಪೇಸ್ಟ್ ವಶಪಡಿಸಿಕೊಂಡಿದ್ದಾರೆ.

ದುಬೈಯಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಇಬ್ಬರು ಪ್ರಯಾಣಿಕರು ಧರಿಸಿದ್ದ ಒಳ ವಸ್ತ್ರದಲ್ಲಿ ಇಟ್ಟು ಚಿನ್ನ ಕಳ್ಳ ಸಾಗಾಟ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಪ್ರಯಾಣಿಕೆಯನ್ನು ತಪಾಸಣೆ ನಡೆಸಿದಾಗ 4.53 ಲಕ್ಷ ರೂ. ಮೌಲ್ಯದ 140 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ 5.63 ಲಕ್ಷ ರೂ. ಮೌಲ್ಯದ 174 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಬುಧವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 27,56,436 ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ ಮಾಡಿ ಇಬ್ಬರನ್ನು ಬಂಧಿಸಲಾಗಿತ್ತು. ರಾಸಾಯನಿಕ ಬಳಸಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿದ್ದರು. ಈ ಹಿಂದೆ ವಿವಿಧ ಸೊತ್ತುಗಳಲ್ಲಿ ಚಿನ್ನ ಅಳವಡಿಸಿ, ಬೆಳ್ಳಿಯ ಬಣ್ಣ ಬಳಿದು, ಗುದದ್ವಾರದಲ್ಲಿಟ್ಟು ಚಿನ್ನ ಸಾಗಾಟ ಮಾಡಿ ಕಸ್ಟಮ್ಸ್ ಅಧಿಕಾರಿಗಳಿಗೆ ಹಲವು ಮಂದಿ ಸೆರೆಯಾಗಿದ್ದರು. ಇದೀಗ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಾಟ ಮಾಡುತ್ತಿರುವುದು ಹೊಸ ವಿಧಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News