ನಿರುದ್ಯೋಗ, ಹಣದುಬ್ಬರ ಹೆಚ್ಚಳದಿಂದ ಆತಂಕ: ಮೋಹನ್ ಭಾಗವತ್

Update: 2019-01-18 16:54 GMT

ನಾಗಪುರ, ಜ.18: ಕೇಂದ್ರ ಸರಕಾರದ ಕಾರ್ಯನೀತಿಯ ಬಗ್ಗೆ ಅಸಮಾಧಾನ ಸೂಚಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ದೇಶದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದ ಸಮಸ್ಯೆ ಹೆಚ್ಚಿದ್ದು ಇದರ ಪರಿಣಾಮವನ್ನು ಎಲ್ಲರೂ ಅನುಭವಿಸುವಂತಾಗಿದೆ ಎಂದಿದ್ದಾರೆ. ದೇಶದಲ್ಲಿರುವ ಕಾರ್ಯನೀತಿ ಎಲ್ಲರ ಮೇಲೆ ಪರಿಣಾಮ ಬೀರಿದೆ. ಇದು ನಾನು ಮಾಡಿದ್ದಲ್ಲ ಅಥವಾ ನೀವು ಮಾಡಿದ್ದಲ್ಲ, ಆದರೂ ನಾವೆಲ್ಲರೂ ಪರಿಣಾಮ ಅನುಭವಿಸುವಂತಾಗಿದೆ. ಹಣದುಬ್ಬರ, ನಿರುದ್ಯೋಗದ ಸಮಸ್ಯೆ ಕೂಡಾ ಇದೇ ರೀತಿಯ ಪರಿಣಾಮ ಬೀರಿದೆ.ಆದ್ದರಿಂದಲೇ ಈ ದೇಶದಲ್ಲಿ ಬದುಕುವ ರೀತಿಯನ್ನು ನಾವೆಲ್ಲಾ ಕಲಿಯಬೇಕಿದೆ ಎಂದು ಭಾಗವತ್ ಹೇಳಿದ್ದಾರೆ.

ನಾಗ್‌ಪುರದ ಪ್ರಹಾರ ಸಮಾಜ ಜಾಗೃತಿ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಹಿಂದೆ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು ಪ್ರಾಣತ್ಯಾಗ ಮಾಡುತ್ತಿದ್ದರು. ಬಳಿಕ ಯುದ್ಧದ ಸಮಯದಲ್ಲಿ ಗಡಿಯಲ್ಲಿ ಯೋಧರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರು. ಆದರೆ ಈಗ, ಯುದ್ಧ ನಡಿಯುತ್ತಿಲ್ಲ, ಆದರೂ ಗಡಿಭಾಗದಲ್ಲಿ ಪ್ರತೀ ದಿನ ನಮ್ಮ ಯೋಧರು ಸಾಯುತ್ತಿದ್ದಾರೆ. ನಾವು (ಸರಕಾರ) ನಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬುದು ಇದರರ್ಥವಲ್ಲವೇ ಎಂದವರು ಪ್ರಶ್ನಿಸಿದರು. ದೇಶವನ್ನು ಮಹಾನ್ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬರೂ ಹೋರಾಟ ನಡೆಸಬೇಕು. ಹೋರಾಡುವುದು ಸರಕಾರ , ಸೇನೆ ಅಥವಾ ಪೊಲೀಸರ ಕೆಲಸ ಎಂದು ಸುಮ್ಮನಿರಬಾರದು. ಇಡೀ ಸಮಾಜವೇ ಪ್ರಯತ್ನ ನಡೆಸಬೇಕು ಎಂದು ಭಾಗವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News