ಕಥುವಾ ಪ್ರಕರಣ: ಮಾಸದ ಕುಟುಂಬದ ದುಃಖ

Update: 2019-01-18 17:00 GMT

ಜಮ್ಮು, ಜ. 18: ಪತ್ರಿಕೆಗಳ ಹೆಡ್‌ಲೈನ್‌ಗಳು ಮಾಯವಾಗಿರಬಹುದು. ಆದರೆ, ಭೀತಿ ಈಗಲೂ ಇದೆ. ದುಃಖ ಕೊನೆಯಾಗಿಲ್ಲ ಎಂದು ವರ್ಷದ ಹಿಂದೆ ಜಮ್ಮುಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ 8 ವರ್ಷದ ಬಾಲಕಿಯ ಕುಟುಂಬ ಹೇಳಿದೆ. ಅಲ್ಪಸಂಖ್ಯಾತ ಅಲೆಮಾರಿ ಸಮುದಾಯಕ್ಕೆ ಸೇರಿದ 8 ವರ್ಷದ ಬಾಲಕಿ ಕುದುರೆಗೆ ಹುಲ್ಲು ಮೇಯಿಸುತ್ತಿದ್ದಾಗ ಅಪಹರಿಸಲಾಗಿತ್ತು. ಅನಂತರ ದೇವಾಲಯದಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿತ್ತು. ಈ ಪ್ರಕರಣದ ವಿಚಾರಣೆ ಈಗ ಪಂಜಾಬ್ ನ್ಯಾಯಾಲಯದ ಪಠಾಣ್‌ಕೋಟ್‌ನಲ್ಲಿ ಅಂತಿಮ ಹಂತದಲ್ಲಿ ಇದೆ. ದೇಶವನ್ನೇ ಆಘಾತಗೊಳಿಸಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಕಥುವಾದಲ್ಲಿರುವ ದೇವಾಲಯದ ಉಸ್ತುವಾರಿ ಹಾಗೂ ಇಬ್ಬರು ಪೊಲೀಸರು ಸಹಿತ 8 ಮಂದಿಯನ್ನು ಬಂಧಿಸಲಾಗಿತ್ತು. ಈ ಘಟನೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಕಾನೂನು ಅದರದ್ದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ಆದರೆ, ಬಾಲಕಿಯ ಕುಟುಂಬಕ್ಕಾದ ಆಘಾತ ಇನ್ನೂ ಮುಂದುವರಿದಿದೆ. ಅವರ ಪ್ರತಿ ದಿನದ ಬದುಕಿನ ದುಃಖದ ಕರಿ ನೆರಳು ಇನ್ನೂ ಮಾಯವಾಗಿಲ್ಲ. ‘‘ನಾವು ಇನ್ನೂ ಆಘಾತದಲ್ಲಿದ್ದೇವೆ’’ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ. ‘‘ಈ ಭೀತಿ ನಿರಂತರ. ನಾನು ನನ್ನ ಮಕ್ಕಳನ್ನು ಹೊರಗೆ ಕಳುಹಿಸುತ್ತಿಲ್ಲ. ಅವರನ್ನು ಮನೆಯಲ್ಲೇ ಇರಿಸಿದ್ದೇನೆ. ಈ ಘಟನೆ ನಡೆದ ಬಳಿಕ ನನ್ನ ಮಕ್ಕಳನ್ನು ಹೇಗೆ ಹೊರಗೆ ಕಳುಹಿಸಲಿ’’ ಎಂದು ಅವರು ಪ್ರಶ್ನಿಸಿದ್ದಾರೆ. ನಾವು ಮಗಳನ್ನು ಕಳೆದುಕೊಂಡಿದ್ದೇವೆ. ಇಂತಹ ನೋವು ಯಾವುದೇ ತಂದೆ ತಾಯಿಗೆ ಬರಬಾರದು ಎಂಬುದು ನಮ್ಮ ಬಯಕೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News