ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಗ್ಗೆ ಟೀಕೆ: ಬಿ.ಕೆ. ಹರಿಪ್ರಸಾದ್ ವಜಾಕ್ಕೆ ಬಿಜೆಪಿ ಒತ್ತಾಯ

Update: 2019-01-18 17:01 GMT

ಹೊಸದಿಲ್ಲಿ, ಜ. 19: ಹಂದಿಜ್ವರ ಸೋಂಕಿಗೆ ಒಳಗಾದ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಟೀಕಿಸಿದ ಕುರಿತು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಕೆ. ಹರಿಪ್ರಸಾದ್ ಅವರನ್ನು ಪಕ್ಷದಿಂದ ಹೊರ ಹಾಕಲು ರಾಹುಲ್ ಗಾಂಧಿ ಅವರಿಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಬಿ.ಕೆ. ಹರಿಪ್ರಸಾದ್ ಅವರನ್ನು ಹೊರ ಹಾಕಲು ಸಾಧ್ಯವಾಗದೇ ಇದ್ದರೆ, ಅಮಿತ್ ಶಾ ವಿರುದ್ಧದ ಹೇಳಿಕೆಗೆ ರಾಹುಲ್ ಗಾಂಧಿ ಬೆಂಬಲಿಸಿದಂತೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿ ಹರಿಪ್ರಸಾದ್, ‘‘ಒಂದು ವೇಳೆ ಅವರು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸಿದರೆ, ಅನಂತರ ಅವರಿಗೆ ವಾಂತಿ ಹಾಗೂ ಬೇಧಿ ಆರಂಭವಾಗಲಿದೆ. ಅದಕ್ಕೇ ಅವರು ಹಂದಿ ಜ್ವರ ಸೋಂಕಿಗೆ ಒಳಗಾಗಿರುವುದು’’ ಎಂದಿದ್ದರು. ಇಂತಹ ದ್ವೇಷದ ಹೇಳಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದೆ ಎಂದು ಬಿಜೆಪಿಯ ವಕ್ತಾರ ಜಿವಿಎಲ್ ನರಸಿಂಹ ರಾವ್ ಆರೋಪಿಸಿದ್ದಾರೆ. ಕಾಂಗ್ರೆಸ್ ಗೆ ಎರಡು ಮುಖಗಳಿವೆ. ಒಂದು ರಾಹುಲ್ ಗಾಂಧಿ. ಇನ್ನೊಂದು ಇಂತಹ ಹೇಳಿಕೆ ನೀಡುವ ಹರಿಪ್ರಸಾದ್‌ರಂತಹ ವ್ಯಕ್ತಿಗಳು ಎಂದು ರಾವ್ ಹೇಳಿದ್ದಾರೆ. ಈ ಹೇಳಿಕೆಯನ್ನು ನಿಜವಾಗಿ ಒಪ್ಪಿಕೊಳ್ಳದೇ ಇದ್ದರೆ, ರಾಹುಲ್ ಗಾಂಧಿ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಅಥವಾ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸುವಂತೆ ಸೂಚಿಸಬೇಕು ಎಂದು ರಾವ್ ಹೇಳಿದ್ದಾರೆ. ಹಂದಿ ಜ್ವರದ ಸೋಂಕಿನಿಂದ ಅಮಿತ್ ಶಾ ಅವರನ್ನು ಹೊಸದಿಲ್ಲಿಯ ಏಮ್ಸ್‌ನಲ್ಲಿ ಬುಧವಾರ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News