×
Ad

ಅಡ್ಯಾರ್ ನಲ್ಲಿ ಯುವಕನ ಕೊಲೆ ಪ್ರಕರಣ: ಅಪರಾಧಿಗೆ 1ವರ್ಷ ಕಠಿಣ ಶಿಕ್ಷೆ

Update: 2019-01-18 22:37 IST

ಮಂಗಳೂರು, ಜ.18: ನಗರದ ಅಡ್ಯಾರ್ ಗ್ರಾಮದ ಹೊಟೇಲೊಂದರಲ್ಲಿ ನಡೆದ ಕೊಲೆ ಪ್ರಕರಣದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 1ವರ್ಷ ಕಠಿಣ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕಿನ ಕೊಳ್ನಾಡು ಕುಡ್ತಮುಗೇರು ನಿವಾಸಿ ಪ್ರಶಾಂತ್ (27) ಶಿಕ್ಷೆಗೊಳಗಾದ ಅಪರಾಧಿ. ಈ ಪ್ರಕರಣದ ಇನ್ನೊಬ್ಬ ಆರೋಪಿ ಸತೀಶ್ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ. ಮೂಲತಃ ನೀರುಮಾರ್ಗ ನಿವಾಸಿ ಸದಾಶಿವ (46)ಎಂಬವರು ಕೊಲೆಯಾದವರು.

ಪ್ರಕರಣ ವಿವರ: 2018ರ ಮಾ.2ರಂದು ರಾತ್ರಿ  ಸದಾಶಿವ ಅವರು ತಾನು ಹಿಂದೆ ಕೆಲಸ ಮಾಡುತ್ತಿದ್ದ ಹೊಟೇಲಿಗೆ ಬಂದಿದ್ದರು. ಈ ಸಂದರ್ಭ ಕೆಲಸದಾಳು ಪ್ರಶಾಂತ್ ಆಕ್ಷೇಪ ವ್ಯಕ್ತಪಡಿಸಿ ಸದಾಶಿವ ಬಂದಿರುವ ಬಗ್ಗೆ ತನ್ನ ಮಾಲಕನಾದ ಸತೀಶ್ ಶೆಟ್ಟಿಗೆ ಕರೆ ಮಾಡಿ ಹೇಳಿದ್ದಾನೆ. ಈ ಸಂದರ್ಭ ಹೊಟೇಲ್‌ಗೆ ಬಂದ ಸತೀಶ್ ಶೆಟ್ಟಿ ಪ್ರಶಾಂತ್ ಜತೆ ಸೇರಿ ಬಿದಿರಿನ ದೊಣ್ಣೆಯಿಂದ ಸದಾಶಿವನ ಕೈಕಾಲು, ಬೆನ್ನಿಗೆ ಹಾಗೂ ದೇಹದ ಇತರ ಭಾಗಗಳಿಗೆ ಹಲ್ಲೆ ಮಾಡಿದ್ದಾರೆ.
ಬಳಿಕ ತೀವ್ರ ಗಾಯಗೊಂಡ ಸದಾಶಿವರನ್ನು ಹೊಟೇಲ್‌ನಿಂದ ಹೊರಗೆ ಹಾಕಿದ್ದಾರೆ. ಗಂಭೀರ ಗಾಯಗೊಂಡ ಸದಾಶಿವ ಹೊರಗೆ ನರಳಾಡಿಕೊಂಡು ಬಿದ್ದಿದ್ದರು. ಮಾ.3ರಂದು ಬೆಳಗ್ಗೆ 8:30ಕ್ಕೆ ಸತೀಶ್ ಶೆಟ್ಟಿ ಇದನ್ನು ಕಂಡು ಅಪಾಯವನ್ನರಿತು ಕೂಡಲೇ ಸದಾಶಿವರ ಸೊಸೆಗೆ ಕರೆ ಮಾಡಿ ‘ಸದಾಶಿವರಿಗೆ ಅನಾರೋಗ್ಯವಿದ್ದು, ಆಸ್ಪತ್ರೆಗೆ ಕೊಂಡೊಯ್ಯುವಂತೆ’ ತಿಳಿಸಿದ್ದಾನೆ. ಈ ವಿಷಯವನ್ನು ಪ್ರಮೀಳಾ ಬೇರೆಯವರ ಸಹಕಾರ ಪಡೆದು ಗಾಯಾಳುವನ್ನು ಆಟೋರಿಕ್ಷಾದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ಸಂದರ್ಭ ವೈದ್ಯರು ಪರೀಕ್ಷಿಸಿ ಗಾಯಾಳು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಚಾರ್ಯ ಪ್ರಕರಣ ವಿಚಾರಣೆ ನಡೆಸಿದ್ದಾರೆ. ಒಟ್ಟು 14 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದು, ಎರಡು ತಂಡಗಳ ವಾದ ಆಲಿಸಿದ ನ್ಯಾಯಾಲಯ ‘ಇದೊಂದು ಕೊಲೆಯೆಂದು ಪರಿಗಣಿಸಲಾಗದ ಅಪರಾಧಿಕ ಮಾನವ ಹತ್ಯೆ’ ಎಂದು ಅಭಿಪ್ರಾಯಪಟ್ಟು ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 304(ಐಐ)ರಡಿ ತಪ್ಪಿತಸ್ಥನೆಂದು ಘೋಷಿಸಿ ಅಪರಾಧಿ ಪ್ರಶಾಂತನಿಗೆ 1ವರ್ಷ ಕಠಿಣ ಜೈಲು ವಾಸ ಶಿಕ್ಷೆ ವಿಧಿಸಿದೆ.

ಅಪರಾಧಿ ಈವರೆಗೆ ಜೈಲುವಾಸದಲ್ಲಿದ್ದ ಅವಧಿಯ ಶಿಕ್ಷೆಯನ್ನು ಕಡಿತಗೊಳಿಸಲು ಆದೇಶದಲ್ಲಿ ತಿಳಿಸಲಾಗಿದೆ. ಇನ್ನೊಬ್ಬ ಆರೋಪಿ, ಹೊಟೇಲ್ ಮಾಲಕ ಸತೀಶ್ ಶೆಟ್ಟಿ ತಲೆಮರೆಸಿಕೊಂಡಿದ್ದು, ಇನ್ನೂ ವಿಚಾರಣೆಗೆ ಲಭ್ಯವಾಗಿಲ್ಲದ ಕಾರಣ ಆತನ ವಿರುದ್ಧ ಪ್ರಕರಣ ಪ್ರತ್ಯೇಕಿಸಲ್ಪಟ್ಟಿದೆ.

ಮೃತ ಸದಾಶಿವರ ತಾಯಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರೆಂದು ಆದೇಶದಲ್ಲಿ ತಿಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಸಿದ್ದಗೌಡ ಎಚ್. ಭಜಂತ್ರಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News