ಜ. 25ರಂದು ಉಜ್ವಲ ಫಲಾನುಭವಿಗಳ ಸಮಾವೇಶ: ನಳಿನ್ ಕುಮಾರ್ ಕಟೀಲ್

Update: 2019-01-18 17:25 GMT

ಬಂಟ್ವಾಳ, ಜ. 18: ಕೇಂದ್ರ ಸರಕಾರ ಪ್ರತಿಯೊಬ್ಬ ಪ್ರಜೆಗೂ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಅವುಗಳನ್ನು ಜನರ ಬಳಿಗೆ ತಲುಪಿಸುವ ಉದ್ದೇಶದಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಗೆಮುಕ್ತ ಜಿಲ್ಲೆಯನ್ನಾಗಿಸುವ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಜ. 25ರಂದು ಉಜ್ವಲ ಫಲಾನುಭವಿಗಳ ಸಮಾವೇಶ ನಡೆಯಲಿದೆ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬಂಟ್ವಾಳದ ಬಿ.ಸಿರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಚಿವರಾದ ರಮೇಶ್ ಜಿಗಜಿಣಗಿ, ಪೆಟ್ರೋಲಿಯಂ ಸಮಿತಿ ಅಧ್ಯಕ್ಷ ಪ್ರಹ್ಲಾದ ಜೋಷಿ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದರು.

ಈ ಕಾರ್ಯಕ್ರಮ ಇಡೀ ಜಿಲ್ಲೆಯ ಅಡುಗೆ ಅನಿಲ ಫಲಾನುಭವಿಗಳಿಗೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ಯಾವುದಾದರೂ ಮಾಹಿತಿಯ ಕೊರತೆಯಿಂದ ಗ್ಯಾಸ್ ಸಂಪರ್ಕ ದೊರಕದವರು, ಹಲವು ವರ್ಷಗಳಿಂದ ನಾನಾ ಕಾರಣಗಳಿಂದ ಗ್ಯಾಸ್ ಸಂಪರ್ಕ ಪಡೆಯಲು ಅಸಾಧ್ಯವಾದವರು, ಕಡುಬಡವರ ಸಹಿತ ಅಡುಗೆ ಅನಿಲ ಪಡೆಯುವ ಎಲ್ಲರೂ ಭಾಗವಹಿಸಬೇಕು ಎಂದರು.

ಈ ಸಂದರ್ಭ ಫಲಾನುಭವಿಗಳಿಗೆ ಮಾಹಿತಿ ಕಾರ್ಯಾಗಾರವೂ ನಡೆಯಲಿದ್ದು, ಸ್ಥಳದಲ್ಲೇ ಅರ್ಜಿ ಸ್ವೀಕಾರ ಇರಲಿದೆ. ರೇಷನ್, ಆಧಾರ್ ಕಾರ್ಡ್ ಪಡೆದು ಕೊಂಡು ಬಂದು ಡಿಕ್ಲರೇಷನ್‍ಗೆ ಸಹಿ ಹಾಕಿದರೆ ಗ್ಯಾಸ್ ದೊರಕುತ್ತದೆ ಎಂದು ನಳಿನ್ ಮಾಹಿತಿ ನೀಡಿದರು.

ಈ ಸಂದರ್ಭ ಫಲಾನುಭವಿಗಳನ್ನು ಗುರುತಿಸುವ ಮಾಹಿತಿ ನೀಡುವ ಕಾರ್ಯ ನಡೆಯಲಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದ ನಳಿನ್, ಪ್ರತಿಯೊಬ್ಬ ಬಡವನೂ ಅಡುಗೆ ಅನಿಲ ಉಪಯೋಗಿಸಬೇಕು ಎಂಬ ಸಂಕಲ್ಪದೊಂದಿಗೆ ಪ್ರಧಾನಿ ಖುದ್ದು ಆಸಕ್ತಿ ವಹಿಸಿದ ಯೋಜನೆ ಇದಾಗಿದೆ ಎಂದರು.

22ರಂದು ಉದ್ಯೋಗಮೇಳ:

ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಜ. 22ರಂದು ಉದ್ಯೋಗಮೇಳ ನಡೆಯಲಿದ್ದು, 7ನೆ ತರಗತಿ ಪಾಸಾದವರಿಂದ ಉನ್ನತ ವಿದ್ಯಾಭ್ಯಾಸ ಪಡೆದವರು ಇದಕ್ಕೆ ಅರ್ಹರಾಗಿರುತ್ತಾರೆ ಎಂದ ಅವರು, ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ಮಂತ್ರಾಲಯದಿಂದ ಮೇಳ ನಡೆಯಲಿದೆ ಎಂದರು. 

ಉದ್ಯೋಗ ಮೇಳ ಮತ್ತು ಉಜ್ವಲ ಮೇಳ ಜನರ ಮೂಲಭೂತ ಅವಶ್ಯಕತೆಗಳಿಗನುಸಾರವಾಗಿ ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ಅವರ ದೂರದೃಷ್ಟಿಯ ಫಲ ಎಂದು ಸಂಸದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಚುನಾವಣಾ ಸಂಚಾಲಕ ಗೋಪಾಲ ಕೃಷ್ಣ ಹೇರಳೆ,  ಪಕ್ಷದ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಜಿ.ಆನಂದ, ಸುಲೋಚನಾ ಜಿ.ಕೆ.ಭಟ್, ರಾಧಾಕೃಷ್ಣ ರೈ ಬುಡಿಯಾರ್, ಮೋನಪ್ಪ ದೇವಸ್ಯ, ರಾಮದಾಸ್ ಬಂಟ್ವಾಳ, ಜನಾರ್ದನ ಬೊಂಡಾಲ, ದೇವಪ್ಪ ಪೂಜಾರಿ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News