ಒಗ್ಗೂಡುವಿಕೆ ಶಕ್ತಿ-ಕ್ರಿಯಾಶೀಲತೆಯಿಂದ ಕಂಬಳಕ್ಕೆ ಯಶಸ್ಸು- ಸುಧಾಕರ ಶೆಟ್ಟಿ

Update: 2019-01-19 15:29 GMT

ಪುತ್ತೂರು, ಜ. 19 : ಒಗ್ಗೂಡುವಿಕೆ ಶಕ್ತಿ ಮತ್ತು ಅದರಿಂದ ಲಭಿಸುವ ಕ್ರೀಯಾಶೀಲತೆಯ ಚೈತನ್ಯವಿದ್ದಾಗ ಯಶಸ್ಸು ಲಭಿಸುತ್ತದೆ. ಈ ಮಾದರಿಯಲ್ಲಿ ತುಳುನಾಡಿನ ಶ್ರಮಜೀವಿಗಳ ಹೆಮ್ಮೆಯ ಜನಪದ ಕ್ರೀಡೆಯಾಗಿ ಕಂಬಳ ಜನಪ್ರೀಯತೆ ಗಳಿಸಿದೆ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅವರು ಹೇಳಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಶನಿವಾರ ಆರಂಭಗೊಂಡ 26 ನೇ ವರ್ಷದ ಐತಿಹಾಸಿಕ ಹೊನಲು ಬೆಳಕಿನ  ಕೋಟಿ -ಚೆನ್ನಯ ಜೋಡುಕರೆ ಕಂಬಳಕ್ಕೆ ಅವರು ಚಾಲನೆ ನೀಡಿದರು.

ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯುವ ಕಂಬಳಕ್ಕೆ ಐತಿಹಾಸಿಕ, ಧಾರ್ಮಿಕ ಹಾಗೂ ಕೃಷಿಗೆ ಸಂಬಂಧಪಟ್ಟ ವಿಶೇಷವಿದೆ. ಮಹಾಲಿಂಗೇಶ್ವರನಿಗೆ ಸೇವೆಯನ್ನು ಪಡೆಯುವ ಇಲ್ಲಿನ ಮಣ್ಣಿನ ಗುಣ ಅತ್ಯಂತ ವಿಶೇಷತೆಯನ್ನು ಹೊಂದಿದೆ. ಕಳೆದ 25 ವರ್ಷಗಳಿಂದ ಕಂಬಳ ಕೂಟ ಯಶಸ್ವಿಯಾಗಿ ನಡೆದು ಬಂದಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಪುತ್ತೂರಿನ ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕ ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ಮಾತನಾಡಿ, ಕಂಬಳ ಕೇವಲ ಸ್ಪರ್ಧೆಯಲ್ಲ, ನಮ್ಮೊಳಗಿನ ಮನೋಸ್ಥಿತಿ, ಪ್ರೀತಿ, ಸಹಕಾರ, ಬಾಂಧವ್ಯವನ್ನು ವೃದ್ಧಿಸುವ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಮನುಷ್ಯತ್ವ ಬೆಸೆಯುವ ಮಹತ್ವದ ಜನಪದ ಕ್ರೀಡೆ ಎಂದರು.

ಪುತ್ತೂರಿನ ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್ ಅವರು ಅಧ್ಯಕ್ಷತೆ ವಹಿಸಿದ್ದರು.ಕೃಷಿ ವರ್ಗದ ನೆಚ್ಚಿನ ಕ್ರೀಡೆಯಾದ ಕಂಬಳಕ್ಕೆ ಜಾತಿ, ಧರ್ಮದ ಮೇರೆ ಇಲ್ಲ. ಎಲ್ಲಾ ವರ್ಗದ ಜನರನ್ನೂ ಒಗ್ಗೂಡಿಸುವ ಶಕ್ತಿ ಕಂಬಳಕ್ಕಿದೆ. ಸಾಮರಸ್ಯವನ್ನು ಬೆಸೆಯುವ ಕಂಬಳಕ್ಕೆ ಪ್ರೋತ್ಸಾಹ ನೀಡಿ ಮುಂದುವರೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ವಕೀಲ ನಿರ್ಮಲ್ ಕುಮಾರ್ ಜೈನ್, ವಸಂತ್ ಕುಮಾರ್ ರೈ ಅವರು ಮಾತನಾಡಿದರು. ಕಂಬಳ ಸಮಿತಿ ಕೋಶಾಧಿಕಾರಿ ಪ್ರಸನ್ನ ಪಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್, ಚೆನ್ನಪ್ಪ ರೈ ದೇರ್ಲ, ಸಂಜೀವ ಪೂಜಾರಿ ಕೂರೇಲು, ಗಂಗಾಧರ ಶೆಟ್ಟಿ, ರವೀಂದ್ರ ಶೆಟ್ಟಿ ನುಳಿಯಾಲು, ಕೆ.ಕರುಣಾಕರ ಸುವರ್ಣ, ಸುಂದರೇಶ್ ಅತ್ತಾಜೆ, ಪ್ರವೀಣ್ ಅಳಕೆಮಜಲು, ಸೀತಾರಾಮ ರೈ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಎನ್. ಕರುಣಾಕರ ರೈ, ಮಹಾಲಿಂಗ ನಾೈಕ್, ಜಾನು ನಾಯ್ಕ್, ಶಿವರಾಮ ಆಳ್ವ, ಮೋಹನ್ ರೈ ಸೂತ್ರಬೆಟ್ಟು, ಹರೀಶ್ ಶೆಟ್ಟಿ, ಜಯಪ್ರಕಾಶ್ ಬದಿನಾರು, ಭಾಗ್ಯೇಶ್ ರೈ, ದರ್ಣಪ್ಪ ಮೂಲ್ಯ ಕಜೆ, ಕೇಶವ ಬೆದ್ರಾಳ, ಸುನೀಲ್ ಕುಮಾರ್ ಶೆಟ್ಟಿ, ತಾರಾನಾಥ ಶೆಟ್ಟಿ,ಎ.ಕೆ. ಜಯರಾಮ ರೈ, ಕರುಣಾಕರ ಶೆಟ್ಟಿ ಮತ್ತಿತರರು ಇದ್ದರು.

ಕಂಬಳ ಸಮಿತಿಯ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಸಮಿತಿ ಸದಸ್ಯ ಕೃಷ್ಣಪ್ರಸಾದ್ ಆಳ್ವ ವಂದಿಸಿದರು. ಉಪಾಧ್ಯಕ್ಷ ಮಠಂತಬೆಟ್ಟು ನಿರಂಜನ ರೈ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News