ಮಂಗನ ಕಾಯಿಲೆ: ಇನ್ನೂ 6 ಸತ್ತ ಮಂಗಗಳ ಕಳೇಬರ ಪತ್ತೆ

Update: 2019-01-19 15:54 GMT

ಉಡುಪಿ, ಜ.19: ಉಡುಪಿ ಜಿಲ್ಲೆಯ ವಿವಿದೆಡೆಗಳಲ್ಲಿ ಇಂದು ಆರು ಸತ್ತ ಮಂಗಗಳ ಕಳೇಬರಗಳು ಪತ್ತೆಯಾಗಿವೆ. ಇವುಗಳಲ್ಲಿ ಎರಡು ಮಂಗಗಳ ಪೋಸ್ಟ್ ಮಾರ್ಟಂ ನಡೆಸಿ, ವಿಸೇರಾವನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಮಂಗನ ಕಾಯಿಲೆಗೆ ಜಿಲ್ಲಾ ನೋಡಲ್ ಅಧಿಕಾರಿ ಯಾಗಿರುವ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಇಂದು ಕುಂದಾಪುರ ತಾಲೂಕಿನಲ್ಲಿ ನಾಲ್ಕು ಬೆಳ್ವೆಯ ಮಡಾಮಕ್ಕಿ ಕಬ್ಬಿನಾಲೆ, ವಂಡ್ಸೆಯ ಕೌಂಜೂರು, ನಾಡಾದ ತಡ್ಕೆ ಹಾಗೂ ಸಿದ್ಧಾಪುರಗಳಲ್ಲಿ, ಉಡುಪಿ ತಾಲೂಕಿನ ಕೊಕ್ಕರ್ಣೆ ಕೆಂಜೂರಿನಲ್ಲಿ ಮತ್ತು ಕಾರ್ಕಳ ತಾಲೂಕು ಕಡ್ತಲ ದೊಡ್ಡೆರಂಗಡಿಯಲ್ಲಿ ಸತ್ತ ಮಂಗಗಳ ಶವ ಪತ್ತೆಯಾಗಿವೆ. ಇವುಗಳಲ್ಲಿ ಮಡಾಮಕ್ಕಿ ಕಬ್ಬಿನಾಲೆ ಹಾಗೂ ಕಡ್ತಲಗಳ ಮಂಗಗಳ ಪೋಸ್ಟ್‌ಮಾರ್ಟಂ ನಡೆಸಿ ಅವುಗಳ ಅಂಗಾಂಗಗಳನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದರು.

ಇನ್ನುಳಿದಂತೆ ಕೊಕ್ಕರ್ಣೆ ಕೆಂಜೂರು ಹಾಗೂ ನಾಡಾ ತಡ್ಕೆಯ ಮಂಗಗಳ ಕಳೇಬರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಅದನ್ನು ಸುಟ್ಟುಹಾಕಲಾಗಿದೆ. ಸಿದ್ಧಾಪುರ ಮತ್ತು ವಂಡ್ಸೆಯ ಆಸುಪಾಸಿನಲ್ಲಿ ಈ ಮೊದಲು ದೊರೆತ ಮಂಗಗಳ ದೇಹದಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿರುವುದ ರಿಂದ ಇಂದು ಸಿಕ್ಕಿದ ಮಂಗಗಳ ದೇಹದ ಪೋಸ್ಟ್ ಮಾರ್ಟಂ ನಡೆಸಲಾಗಿಲ್ಲ ಎಂದವರು ಹೇಳಿದರು.

ಜ.16ರ ನಂತರ ಪರೀಕ್ಷೆಗಾಗಿ ಕಳುಹಿಸಿದ ನಾಲ್ಕು ಮಂಗಗಳ ವಿಸೇರಾದಲ್ಲಿ ಮಂಗನ ಕಾಯಿಲೆಯ ವೈರಸ್ ಪತ್ತೆಯಾಗಿಲ್ಲ. ಇವುಗಳು ಉಡುಪಿಯ ಅಲೆವೂರು, ಕಾರ್ಕಳದ ಮಾಳ, ಇರ್ವತ್ತೂರು ಹಾಗೂ ಕುಕ್ಕಂದೂರುಗಳಲ್ಲಿ ಪತ್ತೆಯಾಗಿದ್ದವು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಈವರೆಗೆ ಒಟ್ಟು ಮೂವರು ರೋಗಿಗಳ ರಕ್ತದ ಸ್ಯಾಂಪಲ್ ಗಳನ್ನು ಸಂಶಯದ ಮೇಲೆ ಶಂಕಿತ ಮಂಗನಕಾಯಿಲೆಗಾಗಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಬ್ರಹ್ಮಾವರ, ನಿಟ್ಟೆ, ಪೆರ್ಣಂಕಿಲದ ಈ ರೋಗಿಗಳ ರಕ್ತವು ನೆಗೆಟೀವ್ ಫಲಿತಾಂಶವನ್ನು ನೀಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಡಿಎಂಪಿ ತೈಲಕ್ಕೆ ಬೇಡಿಕೆ:  ಕುಂದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆ ವೈರಸ್‌ನ ವಾಹಕವಾಗಿರುವ ಉಣ್ಣಿಯನ್ನು ತಡೆಯಲು ದೇಹಕ್ಕೆ ಬಳಸುವ ಡಿಎಂಪಿ ತೈಲಕ್ಕಾಗಿ ಸಾರ್ವಜನಿಕರು, ಸಂಘಸಂಸ್ಥೆಗಳು ಬೇಡಿಕೆಯನ್ನು ಇರಿಸುತಿದ್ದು, ಸಿದ್ಧಾಪುರದ ಸಂಘವೊಂದು ಹಾಗೂ ಹಳ್ಳಿಹೊಳೆ ಕಮಲಶಿಲೆ ದೇವಸ್ಥಾನದ ಮೊಕ್ತೇಸರರಾದ ಸಚ್ಚಿದಾನಂದ ಛಾತ್ರ ಅವರು ತಲಾ 25,000 ರೂ. ಗಳನ್ನು ನೀಡಿದ್ದಾರೆ. ಕುಂದಾಪುರಕ್ಕೆ ಈಗಾಗಲೇ 1000 ಡಿಎಂಪಿ ತೈಲದ ಬಾಟ್ಲಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಮುಂದಿನ ಜ.25ರೊಳಗೆ ತಾಲೂಕಿನ ಮನೆ ಮನೆಗೆ ಭೇಟಿ ಹಾಗೂ ಶಾಲೆಗಳಿಗೆ ಭೇಟಿ ಕಾರ್ಯಕ್ರಮವನ್ನು ಮುಗಿಸುವಂತೆ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಆಶಾ ನಿರ್ವಾಹಕಿಯರಿಗೆ ಸೂಚನೆಗಳನ್ನು ನೀಡ ಲಾಗಿದೆ. ಮನೆ ಮನೆ ಭೇಟಿ ವೇಳೆ ಎಲ್ಲೇ ಜ್ವರದ ಪ್ರಕರಣ ಕಂಡುಬಂದರೆ ಆಶಾ ಕಾರ್ಯಕರ್ತೆಯರು ಅದನ್ನು ಆಶಾ ನಿರ್ವಾಹಕಿಯರ ಗಮನಕ್ಕೆ ತರಲಿದ್ದು, ಮುಂದಿನ ಕ್ರಮವನ್ನು ನಿರ್ವಾಹಕಿಯರು ಕೈಗೊಳ್ಳಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News