ಬ್ರಹ್ಮಾವರ: ಫೆ. 3ರಂದು ಬಿಲ್ಲವ ಮಹಾ ಸಮಾವೇಶ

Update: 2019-01-19 15:55 GMT

ಉಡುಪಿ, ಜ.19: ಜಿಲ್ಲೆಯ ಹಿರಿಯ ಬಿಲ್ಲವ ಮುಂದಾಳು ಬಿ.ಎನ್. ಶಂಕರ ಪೂಜಾರಿ ಅವರ ನೇತೃತ್ವದಲ್ಲಿ ಬಿಲ್ಲವ ಯುವ ವೇದಿಕೆಯು ಉಡುಪಿ ಜಿಲ್ಲಾ ಸಮಸ್ತ ಬಿಲ್ಲವ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಫೆ. 3ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಯೋಜಿಸಿರುವ ಬಿಲ್ಲವ ಮಹಾ ಸಮಾವೇಶಕ್ಕೆ ಉಡುಪಿ ಜಿಲ್ಲಾ ಬಿಲ್ಲವರ ಪರಿಷತ್ತು ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದು ಪರಿಷತ್‌ನ ಸಂಚಾಲಕ ನವೀನ್ ಅಮೀನ್ ಶಂಕರಪುರ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಮಸ್ತ ಬಿಲ್ಲವ ಸಂಘ ಸಂಸ್ಥೆಗಳನ್ನು ಒಂದೇ ಸೂರಿನಡಿಗೆ ತಂದು, ಬಿಲ್ಲವ ಸಮಾಜದ ಶ್ರೇಯೋಭಿವೃದ್ಧಿಗಾಗಿ ಚಿಂತನ ಮಂಥನ ನಡೆಸಿ ಸರಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಪಡೆಯುವ ಉದ್ದೇಶ ದಿಂದ ಜಿಲ್ಲಾ ಮಟ್ಟದಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದವರು ಹೇಳಿದರು.

ಈ ಸಮಾವೇಶಕ್ಕೆ ಬಿಲ್ಲವ ಪರಿಷತ್ ಬೆನ್ನೆಲುಬಾಗಿ ನಿಂತು ಸಂಪೂರ್ಣ ಸಹಕಾರ ನೀಡುವುದು. ಈಗಾಗಲೇ ಬಿಲ್ಲವ ಪರಿಷತ್ ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ತಳಮಟ್ಟದಲ್ಲಿ ಬಿಲ್ಲವರನ್ನು ಸಂಘಟಿಸಿ ಶ್ರೀನಾರಾಯಣಗುರುಗಳ ತತ್ವಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಸುತ್ತಿದೆ ಎಂದು ನವೀನ್ ಶಂಕರಪುರ ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂದ ಅವರು, ಸಮಾವೇಶದಲ್ಲಿ ಬಿಲ್ಲವರ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದರು.

ಬೇಡಿಕೆಗಳು: ಬಿಲ್ಲವರನ್ನು ಈಗಿರುವ ಪ್ರವರ್ಗ 2ಎಯಿಂದ ಪ್ರವರ್ಗ ಒಂದಕ್ಕೆ ಸೇರ್ಪಡೆಗೊಳಿಸುವುದು, ಬಿಲ್ಲವ ಸಮಾಜದ ಅಭಿವೃದ್ಧಿಗಾಗಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಹಾಗೂ ಬಿಲ್ಲವ ಜನಾಂಗದ ಕಸುಬುಗಳಾದ ಕೃಷಿ, ಮೂರ್ತೆದಾರರಿಗೆ ಹಾಗೂ ಬಿಲ್ಲವ ಯುವ ಜನಾಂಗ ಸ್ವಉದ್ಯೋಗ ಕೈಗೊಳ್ಳಲು ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು.

ಬ್ರಹ್ಮಬೈದೇರುಗಳ ಗರೋಡಿಗಳ ಅರ್ಚಕರು ಮತ್ತು ದರ್ಶನಪಾತ್ರಿಗಳಿಗೆ ಮಾಸಾಶನ ಮತ್ತು ಇನ್ನಿತರ ಸೌಲಭ್ಯ ಒದಗಿಸಬೇಕು. ಗರೋಡಿಗಳ ಪಹಣಿ ಪತ್ರಗಳನ್ನು ಗರೋಡಿಯ ಹೆಸರಿಗೆ ವರ್ಗಾಯಿಸಬೇಕು. ಮೂರ್ತೆದಾರ ವೃತ್ತಿ ನಿರತರಿಗೆ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಬೇಕು. ಕುಟುಂಬದ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು ನೀಡಬೇಕು. ಬಿಲ್ಲವ ಸಮಾಜದ ಕುಲದೇವರಾ ದ ಕೋಟಿ-ಚೆನ್ನಯ್ಯ ಗರಡಿಗಳ ನವೀಕರಣಕ್ಕೆ ಧಾರ್ಮಿಕ ದತ್ತಿ ಇಲಾಖೆ ಅನುದಾನ ಬಿಡುಗಡೆಗೊಳಿಸಬೇಕು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವರ ಪರಿಷತ್‌ನ ಪದಾಧಿಕಾರಿಗಳಾದ ಬದ್ರಿನಾಥ ಸನಿಲ್ ಕಟಪಾಡಿ, ಪ್ರಭಾಕರ ಪಾಲನ್, ಚಂದ್ರಹಾಸ ಕೋಟ್ಯಾನ್, ಶೋಭಾ ಪಾಂಗಾಳ, ನಿತಿನ್ ಅಂಬಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News