ಮೋದಿ ಸರಕಾರದ ಅಂತಿಮ ದಿನ ಸಮೀಪಿಸಿದೆ: ಮಮತಾ ಬ್ಯಾನರ್ಜಿ

Update: 2019-01-19 16:26 GMT

ಕೊಲ್ಕತಾ,ಜ.19: ಇಲ್ಲಿನ ಬ್ರಿಗೇಡ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೆಗಾ ರ್ಯಾಲಿಯಲ್ಲಿ ನೆರೆದಿದ್ದ ಲಕ್ಷಾಂತರ ಜನರ ಮುಂದೆ ವಿರೋಧ ಪಕ್ಷಗಳ ನಾಯಕರು ಜೊತೆಯಾಗಿ ಕಾಣಿಸಿಕೊಂಡು ತಮ್ಮ ಬಲ ಪ್ರದರ್ಶನ ಮಾಡಿದರು. ಈ ವೇಳೆ ಮೋದಿ ಸರಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ರ್ಯಾಲಿಯಲ್ಲಿ 23 ಪಕ್ಷಗಳು ಭಾಗವಹಿಸುತ್ತಿವೆ. ಮೋದಿ ಸರಕಾರದ ಅಂತಿಮ ದಿನಗಳು ಸಮೀಪಿಸಿದೆ ಎಂದು ಗುಡುಗಿದರು.

ಓರ್ವ ಮಾಜಿ ಪ್ರಧಾನ ಮಂತ್ರಿ, ಮೂರು ಮುಖ್ಯಮಂತ್ರಿಗಳು, ಆರು ಮಂದಿ ಮಾಜಿ ಮುಖ್ಯಮಂತ್ರಿಗಳು ಮತ್ತು ಐವರು ಮಾಜಿ ಕೇಂದ್ರ ಸಚಿವರು ಮೆಗಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಹಿರಿಯ ನಾಯಕರಾದ ರಾಜನಾಥ್ ಸಿಂಗ್, ಸುಶ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿಯಂತವರನ್ನು ಬಿಜೆಪಿ ನಿರ್ಲಕ್ಷಿಸಿದೆ. 2019ರಲ್ಲಿ ಬಿಜೆಪಿ ಗೆದ್ದರೂ ಅದು ಅದನ್ನೇ ಮಾಡಲಿದೆ ಎಂದು ತಿಳಿಸಿದರು. ಬಿಜೆಪಿ ಹಠಾವೊ, ದೇಶ್ ಬಚಾವೊ ಎಂಬ ಘೋಷವಾಕ್ಯದೊಂದಿಗೆ ಬ್ಯಾನರ್ಜಿ ತನ್ನ ಭಾಷಣವನ್ನು ಮುಗಿಸಿದರು. ಗುಜರಾತ್‌ನ ನಾಯಕ ಹಾರ್ದಿಕ್ ಪಟೇಲ್ ಮತ್ತು ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಆರಂಭಿಕ ಭಾಷಣ ಮಾಡಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೈರಾಗಿದ್ದರೂ ಇಬ್ಬರು ಪ್ರತಿನಿಧಿಗಳ ಕೈಯಲ್ಲಿ ಬೆಂಬಲ ಪತ್ರವನ್ನು ನೀಡಲಾಗಿತ್ತು. ಬಹುಜನ ಸಮಾಜ ಪಕ್ಷದ ನಾಯಕಿ ಮಾಯವತಿಯೂ ತನ್ನ ಪಕ್ಷದ ಹಿರಿಯ ನಾಯಕ ಸತೀಶ್ ಮಿಶ್ರಾರನ್ನು ರ್ಯಾಲಿಗೆ ಕಳುಹಿಸಿದ್ದರು. ಉಳಿದಂತೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆಪ್‌ನ ಅರವಿಂದ್ ಕೇಜ್ರಿವಾಲ್, ಡಿಎಂಕೆಯ ಎಂ.ಕೆ ಸ್ಟಾಲಿನ್, ಜೆಡಿಎಸ್‌ನ ಎಚ್.ಡಿ ದೇವೇಗೌಡ ಮತ್ತು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಗೆಗೊಂಗ್ ಅಪಾಂಗ್, ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಉಮರ್ ಅಬ್ದುಲ್ಲ ಮತ್ತು ಅವರ ತಂದೆ ಫಾರೂಕ್ ಅಬ್ದುಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿಯ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ, ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಕೂಡಾ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ದೇಶವು ಹೊಸ ಪ್ರಧಾನಿಗಾಗಿ ಕಾಯುತ್ತಿದೆ ಎಂದು ಅಖಿಲೇಶ್ ಯಾದವ್ ತಿಳಿಸಿದರೆ ನೀವು ಬಿಜೆಪಿಯನ್ನು  ಉತ್ತರ ಪ್ರದೇಶದಿಂದ ತೊಲಗಿಸಿ ನಾವು ಆ ಕಾರ್ಯವನ್ನು ಪಶ್ಚಿಮ ಬಂಗಾಳದಲ್ಲಿ ಮಾಡುತ್ತೇವೆ ಎಂದು ಬ್ಯಾನರ್ಜಿ ಭರವಸೆ ನೀಡಿದರು.

ತಮಿಳಿನ ಭಾಷಣ ಮಾಡಿದ ಸ್ಟಾಲಿನ್, ಮೋದಿ ದೇಶವನ್ನು ಖಾಸಗಿ ನಿಯಮಿತ ಕಂಪೆನಿಯನ್ನಾಗಿ ಬದಲಾಯಿಸಿದ್ದರು ಮತ್ತು ಅವರು ಅದರ ವ್ಯವಸ್ಥಾನಕ ನಿರ್ದೇಶಕರಾಗಿದ್ದಾರೆ ಎಂದು ತಿಳಿಸುತ್ತಾ, ಮೋದಿಯನ್ನು ಮನೆಗೆ ಕಳುಹಿಸಿ, ದೇಶವನ್ನು ಉಳಿಸಿ ಎಂದು ಜನರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News