ಐಆರ್‌ಸಿಟಿಸಿ ಹಗರಣ: ಲಾಲು ಪ್ರಸಾದ್ ಜಾಮೀನು ಅರ್ಜಿ ಕಾಯ್ದಿರಿಸಿದ ನ್ಯಾಯಾಲಯ

Update: 2019-01-19 16:12 GMT

ಹೊಸದಿಲ್ಲಿ, ಜ. 19: ಸಿಬಿಐ ದಾಖಲಿಸಿದ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಟಿಸಿ)ದ ಭ್ರಷ್ಟಾಚಾರ ಪ್ರಕರಣದಲ್ಲಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪಾಟಿಯಾಲ ಹೌಸ್ ನ್ಯಾಯಾಲಯ ಶನಿವಾರ ಕಾಯ್ದಿರಿಸಿದೆ.

ನ್ಯಾಯಾಲಯ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 11ಕ್ಕೆ ನಿಗದಿಗೊಳಿಸಿದೆ. ಸಿಬಿಐ ದಾಖಲಿಸಿದ ಈ ಪ್ರಕರಣದಲ್ಲಿ ಲಾಲು ಪ್ರಸಾದ್ ಪ್ರಸ್ತುತ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪಾಟಿಯಾಲ ಹೌಸ್ ನ್ಯಾಯಾಲಯ ಡಿಸೆಂಬರ್ 20ರಂದು ಲಾಲು ಪ್ರಸಾದ್ ಅವರಿಗೆ 1 ಲಕ್ಷ ರೂ. ವೈಯುಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಶ್ಯೂರಿಟಿಯಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಲಾಲು ಪ್ರಸಾದ್ ಅವರು 2004ರಲ್ಲಿ ರೈಲ್ವೆ ಸಚಿವರಾಗಿದ್ದಾಗ ಎರಡು ಐಆರ್‌ಸಿಟಿಸಿ ಹೊಟೇಲ್‌ಗಳ ಕಾರ್ಯನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಅನಾರೋಗ್ಯದ ಕಾರಣಕ್ಕೆ ಲಾಲು ಪ್ರಸಾದ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾದರು. ಮೇವು ಹಗರಣಕ್ಕೆ ಸಂಬಂಧಿಸಿ ಪ್ರಸ್ತುತ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಮಧುಮೇಹ ಹಾಗೂ ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಪೊಲೀಸ್ ಕಸ್ಟಡಿಯಲ್ಲಿ ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನಲ್ಲಿ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News