ಉಡುಪಿ: ಜ. 22, 23ರಂದು ‘ಸೀ ವಿಜಿಲ್’ ಅಣುಕು ಕಾರ್ಯಾಚರಣೆ

Update: 2019-01-19 16:29 GMT

ಉಡುಪಿ, ಜ.19: ಕೇಂದ್ರ ಸರಕಾರದ ನಿರ್ದೇಶನದಂತೆ ಭಯೋತ್ಪಾದಕ ದಾಳಿಗಳನ್ನು ಹಾಗೂ ಇತರ ಕೃತ್ಯಗಳನ್ನು ತಡೆಗಟ್ಟಲು ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಹಾಗೂ ಭದ್ರತಾ ದೃಷ್ಟಿಯಿಂದ ಪ್ರಸ್ತುತ ಇರುವ ರಕ್ಷಣಾ ಕ್ರಮಗಳು ಮತ್ತು ಸಿದ್ಧತೆಗಳು ಎಷ್ಟು ಸಮರ್ಥ ವಾಗಿವೆ ಎಂಬ ಬಗ್ಗೆ ಸ್ವಯಂ ವೌಲ್ಯಮಾಪನ ಮಾಡಿಕೊಳ್ಳುವ ಉದ್ದೇಶದಿಂದ ‘ಸೀ ವಿಜಿಲ್’ ಅಣುಕು ಕಾರ್ಯಾಚರಣೆಯನ್ನು ಜ. 22 ಹಾಗೂ 23ರಂದು ಉಡುಪಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗ  ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.

ಇದರ ಮುಖ್ಯ ಉದ್ದೇಶ ರಕ್ಷಣಾ ಸಾಮರ್ಥ್ಯವನ್ನು ಸನ್ನದ್ಧಗೊಳಿಸುವುದು ಮತ್ತು ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ನಡುವಿನ ಸಾಮರಸ್ಯವನ್ನು ವೃದ್ಧಿಸಲು ಹಾಗೂ ಪ್ರಸ್ತುತ ಇರುವ ಸಾಮರ್ಥ್ಯವನ್ನು ಉನ್ನತೀಕರಣಗೊಳಿಸುವ ಉದ್ದೇಶದಿಂದ ‘ಸೀ ವಿಜಿಲ್’ ಪ್ರಯೋಗವನ್ನು ನಡೆಸಲಾಗುತ್ತಿದೆ.

ಈ ಕಾರ್ಯಾಚರಣೆಯು ಕೇವಲ ಅಣುಕು ಕಾರ್ಯಾಚರಣೆಯಾಗಿರುತ್ತದೆ. ಇದೊಂದು ಅರಿವು ಮೂಡಿಸುವ ಕಾರ್ಯವಾಗಿದ್ದು ಇದರಲ್ಲಿ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳು, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲು ಹಾಗೂ ಸಹಕಾರವನ್ನು ನೀಡಲು ವಿನಂತಿಸಲಾಗಿದೆ.

ಈ ಅಣುಕು ಪ್ರದರ್ಶನವನ್ನು ಸಾರ್ವಜನಿಕ ಸ್ಥಳಗಳಾದ ಪ್ರಾರ್ಥನಾ ಮಂದಿರ, ಪ್ರತಿಷ್ಟಿತ ಶಾಲೆ/ಕಾಲೇಜುಗಳಲ್ಲಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಬೀಚ್, ಬಂದರು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಕಡಲ ಕಿನಾರೆಗಳಲ್ಲಿ, ರಸ್ತೆಗಳಲ್ಲಿ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಹಾಗೂ ಅಪರಿಚಿತ ಗುರುತು ಪರಿಚಯ ಇಲ್ಲದ ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಸಂಶಯಾ ಸ್ಪದ ವಸ್ತುಗಳು ಸ್ಥಳದಲ್ಲಿ ಕಂಡುಬಂದಲ್ಲಿ ಯಾವುದೇ ರೀತಿಯಲ್ಲೂ ಭಯಭೀತರಾಗದೆ ಸಮೀಪದ ಪೊಲೀಸ್ ಠಾಣೆ ಅಥವಾ ಉಡುಪಿ ಪೊಲೀಸ್ ಅಧೀಕ್ಷಕರ ಕಚೇರಿ ಕಂಟ್ರೋಲ್ ರೂಂ ದೂ.ಸಂ:100, ಉಡುಪಿ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷರು ದೂ.ಸಂ:1093, ಉಡುಪಿ ಜಿಲ್ಲಾಧಿಕಾರಿ ಕಚೇರಿ ದೂ.ಸಂ: 1077/2574802ಗೆ ಮಾಹಿತಿ ನೀಡಿ ‘ಸೀ ವಿಜಿಲ್’ ಅಣುಕು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News